ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ಅದ್ಧೂರಿಯಾಗಿ ನಡೆಯಿತು. ಶ್ರೀರಂಗಪಟ್ಟಣ ಕ್ಷೇತ್ರದ ಕ್ಯಾತುಂಗೆರೆ ಗ್ರಾಮದಿಂದ ಯಾತ್ರೆ ಆರಂಭವಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಅವರಿಗೆ ಕ್ರೇನ್ ಮೂಲಕ ಬೃಹತ್ ದ್ರಾಕ್ಷಿ ಹಾರ ಹಾಕಿ ಸ್ವಾಗತಿಸಲಾಯಿತು. ಮಾಜಿ ಶಾಸಕ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಕ್ಷೇತ್ರದಲ್ಲಿ ಸಂಚಾರ ನಡೆಸಿತು. ಈ ವೇಳೆ ಹಳ್ಳಿ ಹಳ್ಳಿಗಳಲ್ಲಿ ಡಿಕೆಶಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಡಿಕೆಶಿ ಹಣ ಎರಚಿ ಎಡವಟ್ಟು: ಈ ವೇಳೆ ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಲಾವಿದರತ್ತ ಹಣ ಎರಚಿ ಎಡವಟ್ಟು ಮಾಡಿಕೊಂಡಿದ್ದಾರೆ. ಮಂಡ್ಯದ ಬೇವಿನಹಳ್ಳಿ ಬಳಿ ನಡೆದ ಪ್ರಜಾಧ್ವನಿ ಯಾತ್ರೆಯ ರೋಡ್ ಶೋನಲ್ಲಿ ಭಾಗಿಯಾಗಿದ್ದ ಜಾನಪದ ಕಲಾತಂಡಗಳಿಗೆ ಬಸ್ ಮೇಲೆ ನಿಂತಿದ್ದ ಜಾಗದಿಂದಲೇ 500 ಮುಖಬೆಲೆಯ ನೋಟು ಎಸೆದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರಜಾಧ್ವನಿಯಾತ್ರೆ ಈ ಭಾಗದಲ್ಲಿ ತಡವಾಗಿತ್ತು. ಧ್ರುವನಾರಾಯಣ್ ಅಗಲಿಕೆಯಿಂದ ಮಂಡ್ಯ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನಡೆದಿರಲಿಲ್ಲ. ಇವತ್ತು ಮುಗಿಸಿ ನಂಜನಗೂಡಿನಲ್ಲಿ ಒಂದು ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಹೇಳೋದೆಲ್ಲ ಸುಳ್ಳು ಯಾವುದು ಸಫಲವಾಗಲ್ಲ- ಡಿಕೆಶಿ: ಶ್ರೀರಂಗಪಟ್ಟಣಕ್ಕೆ ದೊಡ್ಡ ಇತಿಹಾಸ ಇದೆ. ಮೈಸೂರು ಮಹಾರಾಜರು, ಸರ್.ಎಂ. ವಿಶ್ವಶ್ವರಯ್ಯ ಅವರು ರೈತರಿಗೆ ಜಮೀನು ಕೊಟ್ಟಿದ್ದಾರೆ, ನೀರು ಒದಗಿಸಿದ್ದಾರೆ. ಸಂಪೂರ್ಣ ರೈತರ ಬದುಕಿಗೆ ಆಶ್ರಯರಾಗಿದ್ದಾರೆ. ಶ್ರೀರಂಗಪಟ್ಟಣದ ಬಗ್ಗೆ ಅಪಾರ ವಿಶ್ವಾಸ ಇದೆ. ಎಲ್ಲಾ ಧರ್ಮದಲ್ಲೂ ಇತಿಹಾಸ ಇದೆ. ಆದ್ರೆ ಬಿಜೆಪಿಯವರು ಸುಳ್ಳಿನ ಕಂತೆ ಮಾಡಲು ಹೊರಟಿದ್ರು. ನಾವು ಖಂಡಿಸಿದ್ದೇವೆ, ಸುಳ್ಳು ಸುಳ್ಳಾಗಿ ಉಳಿದುಕೊಳ್ಳುತ್ತೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಚಿವ ಅಶ್ವತ್ಥನಾರಾಯಣ್ ಅವರು ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು. ಅದು ಯಾವುದು ಸಫಲವಾಗಲ್ಲ ಎಂದು ಡಿಕೆಶಿ ಕಿಡಿಕಾರಿದರು.
ಸಿಪಿವೈ ಕಾಂಗ್ರೆಸ್ಗೆ ಬರುವ ವಿಚಾರ ಗೊತ್ತಿಲ್ಲ: ಹಿಂದಿನ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಕುರಿತಾಗಿ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ಅವರು, ಸಿಪಿವೈ ಅವರೇ ಹೇಳಿದ್ದಾರೆ ಅಂದ್ರೆ ನಾನು ಏನು ಮಾತನಾಡಲಿ. ನಾನು ಆ ಪಾರ್ಟಿ ಬಗ್ಗೆ ಏನು ಹೇಳಲಿ. ಮಾಜಿ ಮಂತ್ರಿ ಹೊಂದಾಣಿಕೆ ಬಗ್ಗೆ ಹೇಳಿದ್ದಾರೆ ಎಂದರು.
ಸಿಪಿವೈ ಕಾಂಗ್ರೆಸ್ ಗೆ ಬರುವ ವಿಚಾರಕ್ಕೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್ ಅವರು, ಸಿ.ಪಿ. ಯೋಗಿಶ್ವರ್ ಕಾಂಗ್ರೆಸ್ಗೆ ಬರುವುದು ನನಗೇನು ಗೊತ್ತಿಲ್ಲ. ನನ್ನ ಹತ್ತಿರ ಯಾರೂ ಬಂದು ಮಾತನಾಡಿಲ್ಲ. ಕಾದು ನೋಡೋಣ ಎಂದು ತಿಳಿಸಿದರು.
ಇದನ್ನೂಓದಿ:ಸಿಲಿಂಡರ್ಗೆ 50% ಸಬ್ಸಿಡಿ, ಆಟೋ ಚಾಲಕರಿಗೆ ಮಾಸಿಕ 2000 ರೂ. ಆರ್ಥಿಕ ನೆರವು : ಜೆಡಿಎಸ್ ಘೋಷಣೆ