ಮಂಡ್ಯ: ಭ್ರಷ್ಟಾಚಾರ ನಡೆಸುತ್ತಿರುವ ತಾ. ಪಂ. ಇಒ ಎಂ.ಗಂಗಣ್ಣ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸದಸ್ಯರು ಒತ್ತಾಯಿಸಿದರು.
ತಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪಿಡಿಒಗಳು ಗಂಗಣ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾ.ಪಂ ಕಚೇರಿಗೆ ಭೇಟಿ ನೀಡಿದಾಗ ವಿನಾಕಾರಣ ಯಾವುದೇ ಸ್ವಿಕೃತಿ ಪತ್ರ ನೀಡದೇ ಕಚೇರಿಯ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು.
ವಿಶೇಷವಾಗಿ ಡಿಸಿಬಿ ವಹಿಯನ್ನು ತಂದು ಇಷ್ಟು ಲಕ್ಷ ಖರ್ಚು ಮಾಡಿದ್ದೀರಿ, ಇದಕ್ಕೆ ಇಷ್ಟು ಪರ್ಸೆಂಟೇಜ್ ನೀಡಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಅಮಾನತು ಮಾಡಿಸುತ್ತೇನೆ ಎಂದು ಹೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಓದಿ-ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ
ಸರ್ಕಾರದ ಸುತ್ತೋಲೆಗಳಲ್ಲಿ ಮಂಜೂರಾದ 1 ಎಕರೆಗೂ ಕಡಿಮೆ ಇರುವ ಏಕ ನಿವೇಶನ ವಿನ್ಯಾಸ ನಕ್ಷೆಗೆ ಅನುಮೋದಿಸಲು ತೆರಿಗೆ ಹೊರತು ಪಡಿಸಿ ಯಾವುದೇ ಶುಲ್ಕಗಳನ್ನು ವಿಧಿಸಲು ಅವಕಾಶವಿಲ್ಲ. ಆದರೂ ಅಭಿವೃದ್ಧಿ ಶುಲ್ಕ ವಸೂಲಿ ಮಾಡಬೇಕೆಂದು ಪಿಡಿಒಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಪಂಚಾಯಿತಿಗಳಿಂದ ತಾಲೂಕು ಪಂಚಾಯ್ತಿಗೆ ಸಲ್ಲಿಸಿರುವ ಆಯವ್ಯಯಕ್ಕೆ ಅನುಮೋದನೆ ನೀಡಲು ಪ್ರತಿ ಗ್ರಾ.ಪಂನಿಂದ 5 ಸಾವಿರ ಬೇಡಿಕೆ ಇಟ್ಟಿದ್ದು, ಹಣ ನೀಡುವವರಿಗೆ ಮಾತ್ರ ಆಯವ್ಯಯಕ್ಕೆ ಸಹಿ ಮಾಡುತ್ತಿದ್ದಾರೆ. ಮಾಲೀಕರಿಂದ ಗುಂಟೆಗೆ ಇಂತಿಷ್ಟು ಹಣ ಪಡೆಯಬೇಕೆಂದು ಹೇಳುತ್ತಿದ್ದಾರೆ. ಲಂಚ ಪಡೆದು ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದರಿಂದ ಅಧಿಕಾರಿಗಳು, ಸಾರ್ವಜನಿಕರ ನಡುವೆ ಗಲಭೆ ಏರ್ಪಟ್ಟು ನೆಮ್ಮದಿಯಿಂದ ಕೆಲಸ ಮಾಡದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಒ ಆಗಿ ಪದೋನ್ನತಿ ಹೊಂದಿ ಇಒ ಆಗಿದ್ದರೂ ಪಿಡಿಒಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಜಿ.ಪಂ ಸಿಇಒ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.