ಮಂಡ್ಯ: ಪಾಂಡವಪುರ ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ, ನ್ಯಾಯಾಲಯ ಆದೇಶದಂತೆ ಉಪವಿಭಾಗಾಧಿಕಾರಿ ಕಚೇರಿಯ ಉಪಕರಣ ಮತ್ತು ಅಧಿಕಾರಿ ವಾಹನ ಹಾಗೂ ಪುರಸಭೆ ಕಚೇರಿಯ ಪೀಠೋಪಕರಣ ಜಪ್ತಿ ಮಾಡಲಾಯಿತು.
ಪಾಂಡವಪುರ ಅಪರ ಸಿವಿಲ್ ನ್ಯಾಯಾಲಯ ಆದೇಶದ ಮೇರೆಗೆ ನ್ಯಾಯಾಲಯದ ಅಮಿನ್ ಸಿಬ್ಬಂದಿಯಾದ ನಾರಾಯಣಗೌಡ, ಸಿದ್ದರಾಜ್, ತ್ರಿವೇಣಿ, ಆನಂದ್ರವರು ವಕೀಲ ಧರ್ಮಪುರ ಲೋಕೇಶ್ ಸಮ್ಮುಖದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿದ್ದ 13 ಕಂಪ್ಯೂಟರ್, ಅಧಿಕಾರಿಗೆ ಸೇರಿದ ಒಂದು ಬೊಲೆರೋ ವಾಹನ ಹಾಗೂ ಕಚೇರಿಯ ಉಪಕರಣಗಳನ್ನು ಶುಕ್ರವಾರ ಬೆಳಗ್ಗೆ ವಶಪಡಿಸಿಕೊಂಡರು.
ನಿನ್ನೆ ಸಂಜೆ ಸಮಯದಲ್ಲಿ ಪಾಂಡವಪುರ ಪುರಸಭೆಗೆ ತೆರಳಿದ ವಕೀಲರು ಹಾಗೂ ನ್ಯಾಯಾಲಯದ ಆದೇಶದಂತೆ ಪುರಸಭೆ ಕಚೇರಿಯಲ್ಲಿದ್ದ 6 ಕಂಪ್ಯೂಟರ್, 30ಕ್ಕೂ ಹೆಚ್ಚು ದೊಡ್ಡ, ಚಿಕ್ಕದಾದ ವಿವಿಧ ಬಗೆಯ ಚೇರ್ಗಳನ್ನು ಕಚೇರಿಯಿಂದ ಹೊರತೆಗೆದು ವಾಹನದಲ್ಲಿ ತುಂಬಿಕೊಂಡು ನ್ಯಾಯಾಲಯದ ವಶದಲ್ಲಿಟ್ಟಿದ್ದಾರೆ.
ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ಒಳಚರಂಡಿ ಫಿಲ್ಟರ್ ಕೇಂದ್ರ ನಿರ್ಮಾಣ ಮಾಡುವ ಸಂಬಂಧ ಪಾಂಡವಪುರ ನಿವಾಸಿ ರೈತ ಸತ್ಯನಾರಾಯಣ ಎಂಬುವರಿಗೆ ಸೇರಿದ ವ್ಯವಸಾಯ ಜಮೀನು ಸುಮಾರು 30 ಗುಂಟೆ ಜಮೀನನ್ನು ಕಳೆದ 2009ರಲ್ಲಿ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಭೂಪರಿಹಾರ ನೀಡಿರಲಿಲ್ಲ.
ಇದನ್ನೂ ಓದಿ: ಟೌನ್ಶಿಪ್, ವಿಲ್ಲಾ ಯೋಜನೆಗೆ ಜಮೀನು ಗುರುತಿಸಲು ಸಚಿವ ಜಮೀರ್ ಸೂಚನೆ; ಅಧಿಕಾರಿಗಳ ತಂಡ ರಚನೆ
ಕಾನೂನು ಪ್ರಕಾರ ರೈತ ಸತ್ಯನಾರಾಯಣ ಅವರಿಗೆ ಸರ್ಕಾರದಿಂದ ಭೂಪರಿಹಾರ ನೀಡದ ಹಿನ್ನೆಲೆ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಭೂ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಕಚೇರಿಯಲ್ಲಿ ಉಪಕರಣ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಕೀಲ ಕುಪ್ಪೆಗಾಲ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಕಳೆದ ವರ್ಷ ಡಿಸಿ ಕಾರು ಜಪ್ತಿ: ಕಳೆದ ವರ್ಷ ಇಂತಹದ್ದೇ ಘಟನೆಯೊಂದು ನಡೆದಿತ್ತು. ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಲುಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿಕೊಳ್ಳುವಂತೆ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಲಯ ಆದೇಶಿಸಿತ್ತು. ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ ಮೇತ್ರೆ ಎಂಬ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸರ್ಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶಿಸಿತ್ತು.
ಏನಿದು ಪ್ರಕರಣ? 2008ರಲ್ಲಿ ರೈತ ಕಲ್ಲಪ್ಪ ಮೇತ್ರೆಯ 33 ಗುಂಟೆ ಜಮೀನು ಭೀಮಾ ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7,39,632 ರೂ. ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು. ಆದರೆ ಕೋರ್ಟ್ ಆದೇಶ ಮಾಡಿದ್ರೂ ಪರಿಹಾರ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಕೋರ್ಟ್ ಆದೇಶ ನೀಡಿತ್ತು.
ಇದನ್ನೂ ಓದಿ: ಕಲಬುರಗಿ: ಪಿಎಂ ಮಿತ್ರ ಟೆಕ್ಸ್ ಟೈಲ್ ಪಾರ್ಕ್.. ಒಂದು ತಿಂಗಳಲ್ಲಿ ಜಮೀನು ಹಸ್ತಾಂತರಕ್ಕೆ ಸಚಿವ ಶಿವಾನಂದ ಪಾಟೀಲ ಸೂಚನೆ