ಮಂಡ್ಯ: ಗೊಂಡಾ, ರಾಜ್ ಗೊಂಡಾ ಎಸ್‌ಟಿ ಪ್ರಮಾಣಪತ್ರ ತೆಗೆದುಕೊಳ್ಳಬೇಕಾದರೆ ಸಿಆರ್‌ಇ ಸೆಲ್‌ನಿಂದ ವರದಿ ತೆಗೆದುಕೊಂಡು ಶಿಫಾರಸು ಮಾಡಬೇಕೆಂದು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬರ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಯಡಿಯೂರಪ್ಪ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅದರಿಂದ ಕಿರುಕುಳ ಹೆಚ್ಚಾಗುತ್ತದೆ. ಈಗಾಗಿ ಆದೇಶವನ್ನು ವಾಪಸ್ ಪಡೆಯಬೇಕು. ಈಗಾಗಲೇ ಇದರ ಬಗ್ಗೆ ಒತ್ತಡ ಹೇರಲು ಕಲಬುರಗಿಯಲ್ಲಿ ಪ್ರತಿಭಟನಾ ಸಭೆ ಕರೆದಿದ್ದಾರೆ ಎಂದರು.
ಅಹಿಂದ, ಹಿಂದ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ವಿರೋಧ ಮಾಡಿದವರು ಯಾರು? ಅಹಿಂದ ಮಾಡುತ್ತೇವೆ ಎಂದು ಹೇಳಿದವರು ಯಾರು? ಮಹದೇವಪ್ಪ ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಾ ಎಂದು ಪ್ರಶ್ನೆ ಮಾಡಿದರು. ಸ್ನೇಹಿತರಾದರೆ ಉತ್ತರ ಕೊಡಬೇಕಾ? ನಾವು ಎಲ್ಲೂ ಅಹಿಂದ ಸಮಾವೇಶ ಮಾಡುತ್ತೇವೆ ಎಂದು ಹೇಳಿಲ್ಲ. ಅದಕ್ಕೆ ಯಾವುದೇ ವಿರೋಧ ಇಲ್ಲ. ಹೀಗಾಗಿ ಈ ಪ್ರಶ್ನೆ ಉದ್ಭವವಾಗಲ್ಲ ಎಂದರು.
ರಾಹುಲ್ ಗಾಂಧಿ ಭೇಟಿ ವಿಚಾರ ಅಹಿಂದ ಎನ್ನುವುದು ಊಹಾಪೋಹ. ಅಂತೆಕಂತೆಗೆಲ್ಲಾ ಉತ್ತರ ಕೊಡುವುದಿಲ್ಲ ಎಂದರು. ಇನ್ನು ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ನಮ್ಮ ದೇಶದಲ್ಲಿ ಒಂದು ಸಂವಿಧಾನ ಇದೆ. ಈ ಸಂವಿಧಾನದಲ್ಲಿ ಮೀಸಲಾತಿ ಯಾರಿಗೆ ಕೊಡಬೇಕು? ಯಾಕೆ ಕೊಡಬೇಕು? ಎನ್ನುವುದು ಇದೆ. ಅದರ ಪ್ರಕಾರ ಯಾರು ಯಾರು ಅರ್ಹರು ಇರುತ್ತಾರೋ ಅವರಿಗೆ ಮಿಸಲಾತಿ ಕೊಡಬೇಕು ಎಂದರು.
ಅವರು ಯಾರೇ ಆಗಲಿ, ಯಾವ ಜಾತಿಯೇ ಆಗಲಿ ಅವಕಾಶಗಳಿಂದ ವಂಚಿತರಾಗಿರುವ ಜಾತಿಗಳಿಗೆ ಸಂವಿಧಾನಬದ್ಧವಾಗಿ ಮೀಸಲಾತಿ ಸಿಗಬೇಕಾದರೆ ಅವರಿಗೆ ಕೊಡಬೇಕು. ಈಗ ಎರಡು ಥರ ಇದೆ. ಎಸ್‌ಸಿ ಮೀಸಲಾತಿ ಮತ್ತು ಎಸ್‌ಟಿ ಮೀಸಲಾತಿ ಕೊಡೋದು ಕೇಂದ್ರ ಸರ್ಕಾರ. ಹೀಗಾಗಿ ಅವರು ಸಂವಿಧಾನ ತಿದ್ದುಪಡಿ ಮಾಡಿ ಕೊಡಬೇಕು ಎಂದರು.
ಓದಿ: ಕುರುಬ ಸಮುದಾಯದ ಸಮಾವೇಶಕ್ಕೆ ಮುಹೂರ್ತ ಫಿಕ್ಸ್ ಮಾಡಿದ ಸಿದ್ದರಾಮಯ್ಯ