ಮಂಡ್ಯ: ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಬೀದಿ ನಾಯಿಗಳ ಹಾವಳಿ ತಡೆಯಲು ಕೆ.ಆರ್. ಪೇಟೆ ಪುರಸಭೆ ಆಡಳಿತ ಅಪರೇಷನ್ ಡಾಗ್ ಕಾರ್ಯಾಚರಣೆ ನಡೆಸಿ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದೆ.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಬೀದಿನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಶ್ಲಾಘನೆ ವ್ಯಕ್ತಪಡಿಸಿವೆ.
ಬೀದಿ ನಾಯಿಗಳ ಹಾವಳಿ ಕುರಿತು ದೂರುಗಳು ಬಂದ ಹಿನ್ನೆಲೆ ಇಂದು ತಹಶೀಲ್ದಾರ್ ಎಂ. ಶಿವಮೂರ್ತಿ, ಕೆ.ಆರ್. ಪೇಟೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪರಿಸರ ಎಂಜಿನಿಯರ್ ರುದ್ರೇಗೌಡ ಮತ್ತು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ದೇವರಾಜು ಕಾರ್ಯಾಚರಣೆ ನಡೆಸಿ 150ಕ್ಕೂ ಹೆಚ್ಚಿನ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾರೆ.
ವೈದ್ಯರಾದ ಡಾ. ದೇವರಾಜು, ಡಾ. ರವಿಕುಮಾರ್, ಡಾ. ಕಾರ್ತೀಕ್ ಪಶುಪಾಲನಾ ಅಧಿಕಾರಿ ಶಂಕರ್ ಮತ್ತು ಸಿಬ್ಬಂದಿ ಎಬಿಸಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ ನಾಯಿಗಳನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ.