ಮಂಡ್ಯ : ಸಕ್ಕರೆ ಕಾರ್ಖಾನೆಯಲ್ಲಿ ಎಸಿ (ಏರ್ ಕಂಡೀಷನರ್) ಸ್ಫೋಟಗೊಂಡು ಅಧಿಕಾರಿ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಜರುಗಿದೆ. ಕಾರ್ಖಾನೆಯ ವಿದ್ಯುತ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಶ್ರೀಧರ್ (52) ಮೃತಪಟ್ಟವರು.
ಬುಧವಾರ ಸಂಜೆ 5 ಗಂಟೆ ವೇಳೆಗೆ ಶ್ರೀಧರ್ ಕಾರ್ಖಾನೆಯ ವಿದ್ಯುತ್ ವಿಭಾಗದ ಕಂಟ್ರೋಲ್ ರೂಂ ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಕೆಲ ಸಮಯದ ನಂತರ ಕೊಠಡಿಯಲ್ಲಿ ಅಳವಡಿಸಿದ್ದ, ಏರ್ ಕಂಡೀಷನರ್ ಸ್ಫೋಟಗೊಂಡು ರಾಸಾಯನಿಕ ಅಂಶ ಸೋರಿಕೆಯಾದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಂಡ್ಯದ ಸ್ಪಂದನಾ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಫೋಟ : ನವ ವಿವಾಹಿತ ಸುಟ್ಟು ಕರಕಲು
ಮನೆಯಲ್ಲಿ ರಾತ್ರಿ ವೇಳೆ ಎಸಿ ಸ್ಫೋಟ : ಇನ್ನು ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಸಾವನ್ನಪ್ಪಿದ್ದ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. 28 ವರ್ಷದ ಶ್ಯಾಮ್ ಮೃತ ದುರ್ದೈವಿ. ಪೆರಂಬೂರ್ನ ಮನವಲನ್ ಬಡಾವಣೆಯ ನಿವಾಸಿಯಾದ ಶ್ಯಾಮ್, ಮನೆಯ ಕೆಳ ಮಹಡಿಯಲ್ಲಿ ಮಲಗಿದ್ದರು. ತಂದೆ ಪ್ರಭಾಕರನ್ ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ಕೂಡಲೇ ತಂದೆ ಕೆಳಗಡೆ ಓಡಿ ಬಂದಿದ್ದಾರೆ. ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್ ರೂಮ್ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಎಸಿ ಸ್ಫೋಟದಿಂದ ಮಗ ಸುಟ್ಟು ಕರಕಲಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಶ್ಯಾಮ್ಗೆ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನದಂದು ಪತ್ನಿ ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಏರ್ ಕಂಡೀಷನರ್ ಫಿಟ್ ವೇಳೆ ದುರಂತ.. 9ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು
ಏರ್ ಕಂಡೀಷನರ್ ಫಿಟ್ ಮಾಡುವಾಗ ದುರಂತ : ಹೊಸದಾಗಿ ತಂದಿದ್ದ ಏರ್ ಕಂಡೀಷನರ್ ಮಷಿನ್ ಕನೆಕ್ಟ್ ಮಾಡುತ್ತಿದ್ದ ವೇಳೆ ಬಹುಮಹಡಿ ಕಟ್ಟಡದದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ನಂತೂರಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವೋ(23) ಮೃತಪಟ್ಟ ಯುವಕ. ಇವರು 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ವಿನಯ್, ನಂತೂರಿನ ರೆಫ್ರಿಜರೇಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೌಂಟ್ ಟಿಯಾರಾ ಅಪಾರ್ಟೆಂಟ್ನಲ್ಲಿ ಗ್ರಾಹಕರೊಬ್ಬರು ಹೊಸದಾಗಿ ತಂದಿದ್ದ ಎಸಿ ಮಷಿನ್ ಕನೆಕ್ಟ್ ಮಾಡಲು ತೆರಳಿದ್ದರು. ಈ ವೇಳೆ ವಿನಯ್ ಏಕಾಏಕಿ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು.