ಮಂಡ್ಯ: ನಟಿ ಸುಮಲತಾ ಹೆಸರೇ ದಳಪತಿಗಳಿಗೆ ಭಯ ಹುಟ್ಟಿಸಿತಾ? ನಿಖಿಲ್ ಕುಮಾರ್ ಗೆಲುವು ಸಾಧಿಸಲು ಸುಮಲತಾ ಹೆಸರಿನಲ್ಲಿ ಗೊಂದಲ ಸೃಷ್ಠಿ ಮಾಡಿದರಾ ಎಂಬ ಅನುಮಾದ ಪ್ರಶ್ನೆ ಇದೀಗ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಹೌದು, ಅನುಮಾನಕ್ಕೂ ಒಂದು ಕಾರಣವಿದೆ. ಮಂಡ್ಯ ಕಣದಲ್ಲಿ 4 ಮಂದಿ ಸುಮಲತಾ ಸೇರಿದಂತೆ 22 ಸ್ಪರ್ಧಾಳುಗಳಿದ್ದಾರೆ. ಮತ ಪಟ್ಟಿಯಲ್ಲಿ ಮೊದಲ ಕ್ರಮ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇದ್ದರೆ, 20ನೇ ಕ್ರಮ ಸಂಖ್ಯೆಯಲ್ಲಿ ನಟಿ, ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಹೆಸರಿದೆ.
19ನೇ ಕ್ರಮ ಸಂಖ‍್ಯೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಇದ್ದರೆ, ಇವರಿಗೆ ತಳ‍್ಳುವ ಗಾಡಿಯ ಗುರುತನ್ನು ನೀಡಲಾಗಿದೆ. 20ನೇ ಸಂಖ‍್ಯೆಯಲ್ಲಿ ಸುಮಲತಾ. ಎ ಇದ್ದು, ಇವರೇ ಸುಮಲತಾ ಅಂಬರೀಶ್ ಆಗಿದ್ದು,ಇವರಿಗೆ ವ್ಯಕ್ತಿ ಕಹಳೆ ಊದುತ್ತಿರುವ ಚಿಹ್ನೆ ನೀಡಲಾಗಿದೆ.
ಇನ್ನು 21ನೇ ಕ್ರಮ ಸಂಖ್ಯೆಯಲ್ಲಿ ಎಂ. ಸುಮಲತಾ ಇದ್ದು, ಇವರಿಗೆ ಬೇಬಿ ವಾಕರ್ ಗುರುತು ನೀಡಲಾಗಿದೆ. 22ರಲ್ಲಿ ಸುಮಲತಾ ಪಿ ಇದ್ದು, ಇವರಿಗೆ ಬ್ಯಾಟ್ ಚಿಹ್ನೆಯನ್ನು ನೀಡಲಾಗಿದೆ. ಉಳಿದಂತೆ 2ನೇ ಕ್ರಮ ಸಂಖ್ಯೆಯಲ್ಲಿ ಬಿಎಸ್ಪಿಯ ನಂಜುಂಡಸ್ವಾಮಿ, 3ನೇ ಕ್ರಮದಲ್ಲಿ ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯ ಗುರುಲಿಂಗಯ್ಯ, 4ನೇ ಕ್ರಮ ಸಂಖ‍್ಯೆಯಲ್ಲಿ ಐಹ್ರಾ ನ್ಯಾಷನಲ್ ಪಾರ್ಟಿಯ ಡಿ.ಸಿ. ಜಯಶಂಕರ್, 6ನೇ ಕ್ರಮದಲ್ಲಿ ಎಂಜಿನಿಯರ್ಸ್ ಪಾರ್ಟಿಯ ಸಂತೋಷ್ ಹೆಚ್.ಪಿ ಇದ್ದಾರೆ. ಇನ್ನುಳಿದಂತೆ 7 ರಿಂದ ಪಕ್ಷೇತರ ಅಭ್ಯರ್ಥಿಗಳಿಗೆ ಕ್ರಮ ಸಂಖ‍್ಯೆ ನೀಡಲಾಗಿದೆ.
ಅಧಿಕಾರಿಗಳ ವರ್ಗಾವಣೆ:
ಚುನಾವಣಾ ಆಯೋಗ ಜಿಲ್ಲೆಯ ನಾಲ್ಕು ಮಂದಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ಮದ್ದೂರು ತಾಲೂಕು ಪಂಚಾಯಿತಿ ಇಒ ಮಣಿಕಂಠ ಹೆಚ್.ಕೆ. ವರ್ಗಾವಣೆಯಾಗಿದ್ದು ಈ ಸ್ಥಳಕ್ಕೆ ಮೈಸೂರಿನ ಕೆ.ಎಸ್. ಮನೋಜ್ ಕುಮಾರನ್ನು ನಿಯೋಜನೆ ಮಾಡಿದೆ.
ನಾಗಮಂಗಲ ತಾಲೂಕು ಪಂಚಾಯಿತಿಯ ಇಒ ಎ.ಆರ್. ಅನಂತ್ ರಾಜು ಅವರನ್ನು ವರ್ಗಾವಣೆ ಮಾಡಿದ್ದು ಮೈಸೂರು ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಎಂ.ಡಿ. ರಾಮಯ್ಯರನ್ನು ನಿಯೋಜನೆ ಮಾಡಿದೆ. ಇನ್ನು ಪಾಂಡವಪುರ ತಾಲೂಕು ಪಂಚಾಯಿತಿ ಇಒ ಮಹೇಶ್ ಆರ್.ಪಿ. ಅವರನ್ನು ವರ್ಗಾವಣೆ ಮಾಡಿ, ಇವರ ಸ್ಥಳಕ್ಕೆ ಕೋಲಾರದ ಜಿಪಂ ಸಹಾಯಕ ಯೋಜನಾಧಿಕಾರಿ ಜಿ.ಮುನಿರಾಜುರನ್ನು ನೇಮಕ ಮಾಡಿದೆ. ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಇಒ ಬಿ.ಎಸ್. ಶಿವಕುಮಾರ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಕೊಡಗು ಜಿಲ್ಲೆಯ ಡಿ.ಬಿ. ಸುನಿಲ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.