ಮಂಡ್ಯ: ವಿದ್ಯುತ್ ಮಾರ್ಗ ಸರಿಪಡಿಸಲು ಕಂಬ ಏರಿದ್ದ ಲೈನ್‌ಮ್ಯಾನ್‌ಗೆ ವಿದ್ಯುತ್ ಶಾಕ್ ಹೊಡೆದು ತೀವ್ರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಸೆಸ್ಕಾಂ ನೌಕರನ ಒಂದು ಕೈ ಸಂಪೂರ್ಣವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಮಧ್ಯಾಹ್ನ ಲೈನ್ ಸರಿಪಡಿಸಲು ಕಂಬ ಹತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಸಾರ್ವಜನಿಕರು ಘಟನೆ ನೋಡಿ ಗಾಬರಿಗೊಂಡು ಕಿರುಚಾಡಿದ್ದಾರೆ. ಈ ವೇಳೆ ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದ ಲೈನ್‌ಮ್ಯಾನ್‌ಗಳು ವಿದ್ಯುತ್ ಸ್ಥಗಿತಗೊಳಿಸಿ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಶಾಕ್‌ಗೆ ಒಳಗಾಗಿ ಕಂಬದ ಮೇಲೆಯೇ ನೇತಾಡುತ್ತಿದ್ದ ನೌಕರನನ್ನು ಇಳಿಸುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಸದ್ಯ ನೌಕರನಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ನೌಕರರಿಗೆ ಎಲ್ಲಾ ರೀತಿಯ ಪ್ರಾಣ ರಕ್ಷಣೆಯ ಸಲಕರಣೆ ನೀಡಲಾಗಿದೆ ಎಂದು ಹೇಳುತ್ತಾರೆ. ಆದರೆ ಎಲ್ಲಾ ನೌಕರರು ಯಾವುದೇ ಸೇಫ್ಟಿ ಸಲಕರಣೆಗಳನ್ನು ಹಾಕಿಕೊಳ್ಳದೆ ಕಂಬ ಏರುತ್ತಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ. ಜಿಲ್ಲೆಯ ಬಹುತೇಕ ನೌಕರರು ಸೇಫ್ಟಿ ಸಲಕರಣೆ ಉಪಯೋಗಿಸದೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ನೌಕರರ ಪ್ರಾಣ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.