ಮಂಡ್ಯ: ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಮೈತ್ರಿ ಆಗುವುದು ಸಂತೋಷ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣ್ ಗೌಡ ಹೇಳಿದರು. ಮಂಡ್ಯದ ಕೆಆರ್‌ಪೇಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸದ್ಯ ಸುಮಲತಾ ಅಂಬರೀಶ್ ಅವರು ಬಿಜೆಪಿ ಬೆಂಬಲಿಸುತ್ತ ಬಂದಿದ್ದಾರೆ. ಅವರು ನಮ್ಮ ಪಕ್ಷದ ಎಂಪಿ ರೀತಿ ಇದ್ದಾರೆ. ಸುಮಲತಾಗೆ ಟಿಕೆಟ್ ನೀಡಬೇಕು. ಜೆಡಿಎಸ್ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚೇನೂ ಇಲ್ಲ. 2019ರಲ್ಲಿ 8 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರು. ಈಗ 8 ರಲ್ಲಿ ಒಂದೇ ಕ್ಷೇತ್ರದಲ್ಲಿ ಜೆಡಿಎಸ್ ಇದೆ ಎಂದು ತಿಳಿಸಿದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಬಿಜೆಪಿಗೆ ನನ್ನ ಬೆಂಬಲ ಕೊಟ್ಟಿದ್ದೇನೆ. ಆ ಬೆಂಬಲ ಈಗಲೂ ಇದೆ. ಮುಂದೆಯೂ ಇರುತ್ತೆ, ನೋಡೋಣ. ಸೀಟು ಕೊಡುವಾಗ ಪಕ್ಷ ಸ್ಥಳೀಯ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಬೇಕು ಎಂದು ಹೇಳಿದರು.
ಚುನಾವಣೆ ಬಂದಾಗ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯ. ಸೀಟು ಹಂಚಿಕೆ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ಇಲ್ಲವಾದರೆ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. 2019 ರ ಚುನಾವಣೆಯೇ ಇದಕ್ಕೆ ಉದಾಹರಣೆ. ಆಗ ಎಲ್ಲಾ ಕಡೆ ಜೆಡಿಎಸ್‌ನವರೇ ಇದ್ದರು. ಆದರೆ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳದ ಕಾರಣ ವ್ಯತಿರಿಕ್ತ ಫಲಿತಾಂಶ ಬಂತು. ಹೀಗಾಗಿ ಇದನ್ನು ರಾಷ್ಟ್ರೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು.
ಮೈತ್ರಿ ಎನ್ನುವುದು ಬೆಂಬಲ ಅಷ್ಟೇ. ಎನ್‌ಡಿಎಯಲ್ಲಿ ಕೇವಲ ಜೆಡಿಎಸ್ ಮಾತ್ರ ಇಲ್ಲ. ಸಾಕಷ್ಟು ಪಕ್ಷಗಳಿವೆ. ಮೈತ್ರಿಯೇ ಬೇರೆ, ಸೀಟು ಹಂಚಿಕೆಯೇ ಬೇರೆ. ನನ್ನ ಸ್ಪರ್ಧೆಯ ವಿಚಾರ ಈಗಲೇ ಹೇಳಲ್ಲ. ಕೆಲವರಿಗೆ ನನ್ನ ನಿರ್ಧಾರದ ಬಗ್ಗೆ ಭಯ ಇದೆ. ಮುಂದೆ ನಿರ್ಧಾರ ಹೇಳುತ್ತೇನೆ. ಅದನ್ನು ಸಸ್ಪೆನ್ಸ್ ಆಗಿಯೇ ಇಡುತ್ತೇನೆ. ಮಂಡ್ಯ ಚುನಾವಣೆ ಅಂದ್ರೆ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರುತ್ತೆ. ಈಗಲೂ ಆ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೇ ಇರಲಿ. ಎಲ್ಲರ ಆಶೀರ್ವಾದ ಇದ್ದರೆ ನಾನು ಮತ್ತೆ ಮಂಡ್ಯದಿಂದ ಸ್ಪರ್ಧೆ ಮಾಡ್ತೀನಿ ಎಂದರು.
ಇದನ್ನೂಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ ಎನ್ನುವ ಎದೆಗಾರಿಕೆ ಸರ್ಕಾರಕ್ಕಿಲ್ಲ: ಹೆಚ್.ಡಿ.ಕುಮಾರಸ್ವಾಮಿ