ಮಂಡ್ಯ: ಕುಂಬಳಕಾಯಿ ಕಳ್ಳರು ಎಲ್ಲಾ ಕಡೆ ಇದ್ದರೆ ನಾನೇನು ಮಾಡಲು ಸಾಧ್ಯ? ಎಂದು ಸಂಸದೆ ಸುಮಲತಾ ಹೇಳಿದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು 'ದಳಪತಿ'ಗಳ ಟೀಕೆಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.
ನಾನು ಪಾಂಡವಪುರ ಶಾಸಕ, ಮದ್ದೂರು ಶಾಸಕ ಅಥವಾ ಮಳವಳ್ಳಿ ಶಾಸಕ ಎಂದು ಯಾವುದೇ ಪಕ್ಷ, ಶಾಸಕರ ಹೆಸರು ಪ್ರಸ್ತಾಪ ಮಾಡಿಲ್ಲ. ಯಾರನ್ನೂ ಗುರಿಯಾಗಿಸಿಕೊಂಡು ಹೇಳಿದ ಮಾತಲ್ಲ. ಅವರವರೇ ವೀರಾವೇಶದಿಂದ ನನ್ನ ಬಗ್ಗೆ ಆರೋಪ ಮಾಡುತ್ತಾ ಮಾತನಾಡುತ್ತಿದ್ದಾರೆ. ನಾನು ಯಾರಿಗೆ ಹೇಳಿದೆನೋ ಅದು ಅವರಿಗೆ ಖಂಡಿತ ತಟ್ಟೇ ತಟ್ಟುತ್ತೆ ಎಂದು ಮತ್ತೆ ಕುಟುಕಿದರು.
ಜೆಡಿಎಸ್ ಶಾಸಕರ ವಿರುದ್ದ ಕಿಡಿಕಾರಿದ ಸಂಸದೆ, ಮಂಡ್ಯ ರಾಜಕಾರಣವೇ ಬೇರೆ ರೀತಿ ಇದೆ. ಪ್ರತಿ ತಾಲ್ಲೂಕಿನಲ್ಲೂ ನಾನು ಕೆಡಿಪಿ ಸಭೆ ಮಾಡಿಕೊಂಡು ಬಂದೆ. ಆದರೆ ಶಾಸಕರು ಸೇರಿ ಎಂಪಿ ಏನಿದ್ದರೂ ದಿಶಾ ಸಭೆ ಮಾತ್ರ ನಡೆಸಬೇಕು. ತಾಲೂಕು ಮಟ್ಟದಲ್ಲಿ ಸಭೆ ಮಾಡಲು ಅಧಿಕಾರ ಇಲ್ಲ ಎಂದು ಪತ್ರ ಬರೆದು ಅದನ್ನು ನಿಲ್ಲಿಸಿಯೇ ಬಿಟ್ಟರು. ಕೆ ಆರ್ ನಗರದಲ್ಲಿ ಕೆಲವು ತಿಂಗಳ ಹಿಂದೆ ಗಲಾಟೆ ಆಯ್ತು. ಅಲ್ಲಿ ಹೋದಾಗ, ಅಲ್ಲಿಗೆ ಬಂದಿದ್ದ ಅಧಿಕಾರಿಗಳನ್ನು ಕರೆ ಮಾಡಿ ವಾಪಸ್ ಕರೆಸಿಕೊಳ್ತಾರೆ. ನಂತರ ನನ್ನ ಮೇಲೆ ಹಲ್ಲೆ ಮಾಡೋಕೆ ಗೂಂಡಾಗಳನ್ನು ಕಳುಹಿಸುತ್ತಾರೆ. ಎಂಪಿ ಇಲ್ಲಿಗೆ ಬರಬಾರದು ಎಂದು ಹೆದರಿಸುತ್ತಾರೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ.. ಸಂಸದೆ ಸುಮಲತಾ ಆರೋಪ