ಮಂಡ್ಯ: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಈ ಹಿಂದೆ ಅಂಬರೀಶ್ ಸ್ಥಳ ಮತ್ತು ಅನುದಾನವನ್ನು ಮಂಜೂರು ಮಾಡಿಸಿಕೊಟ್ಟಿದ್ದರು. ಈಗ ಅದನ್ನು ಉದ್ಘಾಟನೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ, ಇದು ಹೆಮ್ಮೆಯ ವಿಷಯ ಎಂದು ಸಂಸದೆ ಸುಮಲತಾ ಹೇಳಿದರು. ತುಂಬಕೆರೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ನಂತರ ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ, ಮಂಡ್ಯವನ್ನು ಅಭಿವೃದ್ದಿ ಪಥದಲ್ಲಿ ನಡೆಸುವುದರ ಬಗ್ಗೆ ಗಮನ ಕೇಂದ್ರೀಕರಿಸಿದ್ದೇನೆ. ಈ ವಿಚಾರಗಳ ಬಗ್ಗೆ ತಿಳಿದುಕೊಂಡ ಪರಿಣಿತರಿದ್ದಾರೆ ಅವರನೇ ಕೇಳಿ, ಈ ವಿಷಯ ಚುನಾವಣೆ ಇರುವುದರಿಂದ ವಿವಾದಾತ್ಮಕ ವಿಷಯವಾಗಿರುವುದ ಸಹಜ. ನಾನು ಅದರ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ನನ್ನ ಬಗ್ಗೆ ಮಾತನಾಡಿದರೆ ಮೈಲೇಜು ಹೆಚ್ಚಾಗಿ ಸಿಗುತ್ತದೆ - ಸುಮಲತಾ: ಡಾ. ರವೀಂದ್ರ ಅವರು ಸಂಸದರು ಸ್ವಾಭಿಮಾನಿ ಪದವನ್ನು ಬಳಸಬೇಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಏನು ಇಂಡಿಯಾದಲ್ಲಿ ಇಲ್ವಾ? ಪಾಕಿಸ್ತಾನದಲ್ಲಿ ಇದೆಯಾ? ಬಿಜೆಪಿ ಪಕ್ಷ ಪಾಕಿಸ್ತಾನದಲ್ಲಿ ಇದೆಯಾ? ಬಿಜೆಪಿ ಎಂಟು ವರ್ಷಗಳಿಂದ ದೇಶವನ್ನು ಆಳುತ್ತಿರುವ ಪಕ್ಷ, ಎರಡು ಪಕ್ಷಗಳು ರಾಷ್ಟೀಯ ಪಕ್ಷಗಳೇ. ಒಂದು ಪಕ್ಷಕ್ಕೆ ಹೋದರೆ ಹೇಗೆ ಸ್ವಾಭಿಮಾನ ಇಲ್ಲ, ಇನ್ನೊಂದು ಪಕ್ಷದಲ್ಲಿ ಇದ್ದರೆ ಮಾತ್ರ ಸ್ವಾಭಿಮಾನ ಇದೆ ಅಂದರೆ ಅದು ಲಾಜಿಕ್ ಇಲ್ಲದ ವಿಷಯ. ಅವರವರ ಅನುಕೂಲಕ್ಕೆ ಅವರು ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ ಬಿಡಿ ನನ್ನ ಬಗ್ಗೆ ಮಾತನಾಡಿದರೆ ಮೈಲೇಜು ಹೆಚ್ಚಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಲೇವಡಿ ಮಾಡಿದರು.
ನನ್ನನ್ನು ಗೆಲ್ಲಿಸೋಕೆ 15 ಲಕ್ಷ ಜನ ಶ್ರಮ ಪಟ್ಟಿದ್ದಾರೆ, ಮತ ಹಾಕಿದ್ದಾರೆ. ಯಾರೋ ಒಬ್ಬರು ನನ್ನಿಂದ ಅಂತ ಹೇಳಿಕೊಳ್ಳೋದು ಸರಿಯಾದ ಮಾತಲ್ಲ. ನೀವು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ನಲ್ಲಿರುವ ನಿಮ್ಮ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಭಿಮಾನಿಗಳು ನಮ್ಮನ್ನ ಇಷ್ಟ ಪಡೋದು ಪಕ್ಷ ನೋಡಿ ಅಲ್ಲ. ನಾವು ಯಾವುದೇ ಪಕ್ಷದಲ್ಲಿದ್ದರು ನಮ್ಮನ್ನು ಅಭಿಮಾನಿ ವರ್ಗ ಪ್ರೀತಿಸುತ್ತದೆ. ಅದನ್ನು ನೀವು ರಾಜಕಾರಣಕ್ಕೆ ಬೆರಸುವುದು ಸರಿಯಲ್ಲ ಎಂದರು.
ಮಂಡ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಬಗ್ಗೆ ಮಾತನಾಡಿದ ಸುಮಲತಾ, ಇದು ಇನ್ನೂ ತೀರ್ಮಾನ ಆಗಿಲ್ಲ. ಯಾವ ಕಡೆ ಹೋಗಬೇಕು ಎಲ್ಲೆಲ್ಲಿ ಅಗತ್ಯ ಇದೆ ಎಂಬ ಬಗ್ಗೆ ಸಂಪೂರ್ಣ ಚರ್ಚೆಯಾಗಿಲ್ಲ. ಧರ್ಮೆಂದ್ರ ಪ್ರಧಾನ್ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಇದ್ದಾರೆ. ಇನ್ನೇರಡು ದಿನಗಳಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ. ಬಂದ ಮೇಲೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಮಾಡುವ ಬಗ್ಗೆ ನಿರ್ದಿಷ್ಟವಾಗಿ ಪ್ಲಾನ್ ನಡೆದಿಲ್ಲ ಎಂದರು. ಇನ್ನು ರಾಜ್ಯರಾಜಕಾರಣಕ್ಕೆ ಸುಮಲತಾ ಪ್ರವೇಶಿಸುವ ವಿಚಾರ ನನ್ನ ಮೈಂಡ್ನಲ್ಲಿ ನಿರ್ಧಾರ ಆದಾಗ ಘೋಷಣೆ ಮಾಡ್ತೀನಿ ಎಂದು ಹೇಳಿದರು.
ಇದನ್ನೂ ಓದಿ:ನಿರ್ಮಲಾನಂದ ಸ್ವಾಮೀಜಿಗಳಲ್ಲಿ ಕ್ಷಮೆ ಯಾಚಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ