ಮಂಡ್ಯ: ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ನಟಿ ಸುಮಲತಾ ಅಂಬರೀಶ್, ಮೊದಲ ಬಾರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತಮ ಚರ್ಚೆ ನಡೆದು, ಹಲವು ಐತಿಹಾಸಿಕ ತೀರ್ಮಾನಗಳಿಗೆ ಸಾಕ್ಷಿಯಾಗಿದೆ ಅಂತಾ ಹೇಳಿದರು.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿ ಸಾಕಷ್ಟು ಕಲಿತಿದ್ದೇನೆ. ಉತ್ತಮ ಚರ್ಚೆಯಲ್ಲಿ ಪಾಲ್ಗೊಂಡಿದ್ದೇನೆ. ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿ ಆಗಿದ್ದೇನೆ ಎಂದರು.
370ನೇ ವಿಧಿ ರದ್ದು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಲವು ಬಾರಿ ಶೂಟಿಂಗ್ಗೆ ಕಾಶ್ಮೀರಕ್ಕೆ ಹೋಗಿದ್ವಿ. ಆಗ ಹಲವು ನಿಬಂಧನೆಗಳು ಅರಿವಿಗೆ ಆಗಲೇ ಬಂದಿತ್ತು. ಇದ್ಯಾವ ನ್ಯಾಯ ಎಂಬುದು ಮನಸ್ಸಿಗೆ ಅವಾಗಲೇ ಬಂದಿತ್ತು. ಇದು ಉತ್ತಮ ನಿರ್ಧಾರ, ರದ್ದಾಗಿರುವುದು ಸಂತೋಷ ಎಂದರು.
ಪ್ರಧಾನಿಯವರನ್ನು ಭೇಟಿಯಾದ ವೇಳೆ ಮಂಡ್ಯ ಅಭಿವೃದ್ಧಿಗೆ ಮನವಿ ಮಾಡಿದ್ದೇನೆ. ನಿಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದ್ರು ಎಂದರು.
ಡ್ಯಾಂ ಸೇಫ್ಟಿ ಬಿಲ್ ವಿಚಾರ ಬಂದಾಗ KRS ಬಗ್ಗೆ ಮಾತನಾಡಿದ್ದೇನೆ. ಲೋಕಸಭೆಯಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಸಿಎಂ ಕೆಲ ದಿನಗಳ ಹಿಂದೆ ಸಭೆ ಕರೆದಿದ್ರು. ಅವರಲ್ಲೂ ಮನವಿ ಮಾಡಿದ್ದೇನೆ, ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಮಂಡ್ಯದಲ್ಲಿ ಡೇಂಜರ್, ರೆಡ್ ಅಲರ್ಟ್ ಲೆವೆಲ್ ಇಲ್ಲ. ಡೇಂಜರ್ ರೀತಿಯಲ್ಲಿ ಯಾವುದೇ ಪ್ರವಾಹವಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಕಾವೇರಿ ನೀರಿನ ವಿಚಾರ ಕಾವೇರಿ ಪ್ರಾಧಿಕಾರದ ಅಡಿಯಲ್ಲಿ ನಡೆಯಲಿದೆ. ಕಾವೇರಿ ಟ್ರಿಬ್ಯೂನಲ್ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಮಂಗಳವಾರದಿಂದ ಸೆಪ್ಟೆಂಬರ್ ತನಕ ಕ್ಷೇತ್ರ ಪ್ರವಾಸ ನಡೆಸಲಿದ್ದೇನೆ. ಆಫೀಸರ್ಸ್, ಸಾರ್ವಜನಿಕರ ಜೊತೆ ಚರ್ಚೆ, ಸಭೆ ನಡೆಸಲಾಗುವುದು ಎಂದರು.
ಸಮಾವೇಶದಿಂದ ಸಮಯ ಹರಣ:
ಸಮಾವೇಶದ ಬದಲು ಜನರ ಬಳಿಗೆ ಹೋಗ್ತೇವೆ. ಸಮಸ್ಯೆಗೆ ಪರಿಹಾರ, ಅಭಿವೃದ್ಧಿ ಕೆಲಸಗಳಾಗೋದು ಮುಖ್ಯ. ದರ್ಶನ್ ಬರ್ತಿಲ್ಲ, ಯಶ್ ಬರ್ತಿಲ್ಲ ಅನ್ನೋದಲ್ಲ ಸಮಸ್ಯೆ ಎಂದು ಟ್ರೋಲಿಗರಿಗೆ ಸುಮಲತಾ ತಿರುಗೇಟು ನೀಡಿದರು.
ನನ್ನದು ಮೊದಲ ಅಧಿವೇಶನ. ಅದರಲ್ಲಿ ಭಾಗಿಯಾಗಿದ್ದೆ. ಭಾಗಿಯಾಗದಿದ್ರೆ ಜನರಲ್ಲಿ ತಪ್ಪು ಭಾವನೆ ಬರುತ್ತೆ. ನಾನು ಹಾಲಿಡೇಸ್ ಕಳೆಯಲು ಅಲ್ಲಿ ಹೋಗಿರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದ ಬಗ್ಗೆ ಗಮನ ಕೊಡುವ ಅವಶ್ಯಕತೆ ಇಲ್ಲ. ಅಲ್ಲಿನ ಮುಖಂಡರ ಜೊತೆ ಸಂಪರ್ಕ ಸಾಧಿಸದಿದ್ರೆ ಇಲ್ಲಿ ಏನೂ ಮಾಡಲು ಸಾದ್ಯವಿಲ್ಲ. ಜನತಾ ದರ್ಶನದ ಬಗ್ಗೆ ಚಿಂತನೆ ನಡೆಸ್ತಿದ್ದೇನೆ. ಅಧಿಕೃತವಾಗಿ ಕಚೇರಿ ತೆರೆಯಲು ಡಿಸಿಯವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ಸಿನಿಮಾ ಇಂಡಸ್ಟ್ರಿ ಮೂಲಕ ಪರಿಹಾರ:
ನೆರೆಪೀಡಿತರ ನೆರವಿಗೆ ಸಿನಿಮಾ ಇಂಡಸ್ಟ್ರಿ ಮೂಲಕ ಪರಿಹಾರ ಸಂಗ್ರಹಣೆಗೆ ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಅಂತಿಮ ಚರ್ಚೆ ನಡೆಸಲಾಗುತ್ತೆ. ಕನ್ನಡ ಫಿಲ್ಮ್ ಇಂಡಸ್ಟ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದರು.