ಮಂಡ್ಯ : ಮಂಡ್ಯ ರಾಜಕಾರಣ ಅಂದ್ರೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತೆ. ಅದೇ ರೀತಿ ಮಂಡ್ಯದಲ್ಲಿ ಪರಿಷತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ನಡೆಯಿತು.
ಪರಿಷತ್ ಗದ್ದುಗೆ ಏರಲು ಮೂರು ಪಕ್ಷದಿಂದ ತಂತ್ರ ರೂಪಿಸಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಣ್ಣೀರಿಟ್ಟು ತಮಗಾದ ಮೋಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಶೇಕಡಾ 99ರಷ್ಟು ಮತದಾನ ನಡೆದಿದೆ.
ಶಾಂತಿಯುತ ಮತದಾನ : ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಇಂದು ಬೆಳಗ್ಗೆ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕು ಪಡೆದುಕೊಂಡಿತು.
ಸಚಿವ ನಾರಾಯಣ್ ಗೌಡ, ಕೆ.ಆರ್.ಪೇಟೆಯ ಪುರಸಭೆಯಲ್ಲಿ ಮತದಾನ ಮಾಡಿದ್ರೆ, ಸಂಸದೆ ಸುಮಲತಾ, ಶಾಸಕ ಎಂ.ಶ್ರೀನಿವಾಸ್ ನಗರಸಭೆಯಲ್ಲಿ ಮತದಾನ ಮಾಡಿದರು. ಜಿಲ್ಲೆಯ ಶಾಸಕರು ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಕೇಂದ್ರಕ್ಕೆ ಸದಸ್ಯರು ಹಾಗೂ ಪುರಸಭಾ ಸದಸ್ಯರ ಜೊತೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಜಿಲ್ಲೆಯಲ್ಲಿ ಸುಮಾರು ಶೇ. 99.85 &ರಷ್ಟು ಮತದಾನ ನಡೆದಿದೆ. 4,024 ಮತದಾರರ ಪೈಕಿ 4,018 ಮಂದಿ ಮತದಾನ ಮಾಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು.
ಮತದಾನ ಶುರುವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಮಂಜು ಮೋಸ ನೆನೆದು ಕಣ್ಣೀರಿಟ್ಟರು. ಮತದಾರ ನನ್ನ ಕೈ ಬಿಡಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರು. ಬಿಜೆಪಿ ಮೈತ್ರಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ಇದೀಗ ಎಲ್ಲವನ್ನೂ ನೀರಿನಲ್ಲಿ ಹೋಮ ಮಾಡಿದ ಹಾಗೆ ಮಾಡುತ್ತಿದ್ದಾರೆ.
ನನ್ನ ಹೋರಾಟ ನಾನು ಬಿಡುವುದಿಲ್ಲ. ಯಾರು ಹೀಗೆ ಮಾಡ್ತಾ ಇದ್ದಾರೆ ನನಗೆ ಗೊತ್ತಿಲ್ಲ. ಈಗ ಎಲ್ಲಾ ಕಾಲ ಮುಗಿದು ಹೋಗಿದೆ. ನಾನು ಕೊನೆ ಕ್ಷಣದ ಹೋರಾಟ ಮಾಡುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ. ಪಾಂಡವಪುರದಲ್ಕಿ ಮತದಾನ ಮಾಡಿದ ಬಳಿಕ ಶಾಸಕ ಸಿ ಎಸ್ ಪುಟ್ಟರಾಜು ಮಾತನಾಡಿ, ಬಿಜೆಪಿ ಅವರು ಕಾಂಗ್ರೆಸ್‌ಗೆ ವಿರೋಧ ಮಾಡುತ್ತಾರೆ.
ಆದ್ರೆ, ಇವತ್ತು ಯಾವ ತಂತ್ರಗಾರಿಕೆನೋ ಗೊತ್ತಿಲ್ಲ. ಪಾಪಾ.. ಬಿಜೆಪಿ ಅಭ್ಯರ್ಥಿ ಕಣ್ಣೀರಾಕುವ ಪರಿಸ್ಥಿತಿ ಎದುರಾಗಿದೆ. ನಾವು ಏನು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಪಕ್ಷ ಬೆಳೆಯಬಾರದೆಂದು ನಮ್ಮವರೆ ತುಳಿಯುತ್ತಿದ್ದಾರೆ ಅಂತಿದ್ದಾರೆ. ಒಳ್ಳೆತನ ಇರುವ ಅಭ್ಯರ್ಥಿ ಪಾಪಾ, ಯಾಕೆ ಕಣ್ಣೀರು ಹಾಕುತ್ತಿದ್ದಾರೆ ಎಂದರು.