ಮಂಡ್ಯ : ಜಿಲ್ಲೆಯ ನಾಗಮಮಂಗಲದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಸ್ವತಃ ಕ್ಷೇತ್ರದ ಶಾಸಕರಾಗಿರುವ ಸುರೇಶ್‌ಗೌಡ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇದಕ್ಕೆ ಕಾರಣ ಏನು ಎಂಬುದನ್ನು ಅವರು ಹೇಳಿದ್ದಾರೆ. ಈ ಅಕ್ರಮ ಗಣಿಕಾರಿಕೆ ಬಗ್ಗೆ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಅಕ್ರಮವನ್ನು ತಡೆಯುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಕೊಪ್ಪದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜನ ಒರಟಾದರೂ ಅವರ ಮನಸ್ಸು ಮೃದುವಾಗಿರುತ್ತದೆ. ನಾವು ಭಯೋತ್ಪಾದಕರಲ್ಲ. ನಮ್ಮನ್ನು ಜನರು ಪ್ರೀತಿಯಿಂದ ಗೆಲ್ಲಿಸಿದ್ದಾರೆ ಎಂದರು. ಅಲ್ಲದೆ, ಅಕ್ರಮ ಗಣಿಕಾರಿಕೆಯ ಹೈಡ್ರಾಮಾಕ್ಕೆ ಕಾರಣ ಜಿಲ್ಲಾ ಗಣಿ ಅಧಿಕಾರಿಯ ವರ್ಗಾವಣೆ. ಇದನ್ನು ಸಿಬಿಐಗೆ ವಹಿಸಿದರೆ ಸತ್ಯಾಸತ್ಯತೆ ತಿಳಿಯುತ್ತದೆ. ಅಕ್ರಮ ಗಣಿಗಾರಿಕೆ ಆಗ ಬಯಲಾಗಲಿದೆ ಎಂದು ಹೇಳಿದರು.
ಮಕ್ಕಳನ್ನು ತಾಯಿಯೇ ಭಯೋತ್ಪಾದಕರು ಎಂದರೆ ಹೇಗೆ? ಮಕ್ಕಳು ತಪ್ಪು ಮಾಡಿದ್ದರೆ ತಾಯಿ ಕ್ಷಮಿಸಬೇಕು. ಸಂಸದೆ ಸುಮಲತಾ ಮತ್ತು ನಮ್ಮದು ತಾಯಿ-ಮಗನ ಸಂಬಂಧ. ತಪ್ಪುಗಳಾಗಿದ್ದರೆ ಹೊಟ್ಟೆಗಾಕಿಕೊಂಡು ಕ್ಷಮಿಸಲಿ ಎಂದು ಬೇಡಿಕೊಂಡರು.
ನಾಗಮಂಗಲ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಹಲವು ಬಾರಿ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಸಂಸದರನ್ನು ನಮ್ಮ ತಾಲೂಕಿಗೆ ಸ್ವಾಗತಿಸುತ್ತೇನೆ. ಅಕ್ರಮ ಗಣಿಗಾರಿಕೆ ನಿಲ್ಲಿಸಲಿ ಎಂದು ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುರೇಶ್ ಗೌಡ ಇದೇ ವೇಳೆ ಚಾಲನೆ ನೀಡಿದರು.