ಮಂಡ್ಯ : ಕೊರೊನಾ ಔಷಧಿ ಹೆಸರಲ್ಲಿ ಜನರಿಗೆ ಸರ್ಕಾರ ವಿಷ ನೀಡುತ್ತಿದೆ ಎಂದು ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ರೋಗಿಗಳಿಗೆ ಅವಧಿ ಮುಗಿದಿರುವ ಔಷಧಿ ನೀಡಲು ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಕೊರೊನಾ ಹೆಸರಲ್ಲಿ ಜನರನ್ನು ಹತ್ಯೆ ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರೆಮ್ಡೆಸಿವಿರ್ ಇಂಜೆಕ್ಷನ್ ಅವಧಿ ಜನವರಿಗೇ ಮುಗಿದಿದೆ. ಆದರೂ, ಸೋಂಕಿತ ವ್ಯಕ್ತಿಗಳಿಗೆ ನೀಡುತ್ತಿರುವುದು ಖಂಡನೀಯ. ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು ಸೋಂಕಿತ ವ್ಯಕ್ತಿಗಳಿಗೆ ನೀಡಲಾಗುತ್ತಿರುವ ಮಾತ್ರೆಗಳಲ್ಲಿ ಸರ್ಕಾರ ನಕಲಿ ಮಾಡುತ್ತಿರುವ ಅನುಮಾನವಿದೆ. ಅವಧಿ ಮುಗಿದಿರುವ ಔಷಧಿಯನ್ನು ನೀಡುತ್ತಿರುವುದರಿಂದಲೇ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಸರ್ಕಾರ ಕೋವಿಡ್ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಈ ರೀತಿಯ ನಿರ್ಲಕ್ಷ್ಯ ಧೋರಣೆಯನ್ನು ಬಿಡಬೇಕು. ಅವಧಿ ಮುಗಿದಿರುವ ಔಷಧಿಗಳನ್ನು ಉಪಯೋಗಿಸುವಂತೆ ಸರ್ಕಾರ ಆದೇಶ ನೀಡಿರುವುದು ನನಗೆ ಗಾಬರಿ ಹುಟ್ಟಿಸಿದೆ. ಆ ಔಷಧಿಗಳು ವಿಷಕ್ಕೆ ಸಮಾನ ಎಂದ ಅವರು, ಅವುಗಳನ್ನು ರೋಗಿಗಳಿಗೆ ಹೇಗೆ ಉಪಯೋಗಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಓದಿ : ಸಕ್ಕರೆ ನಾಡಲ್ಲಿ 520 ಕೊರೊನಾ ಕೇಸ್ ಪತ್ತೆ.. ವೀಕೆಂಟ್ ಕರ್ಫ್ಯೂಗೆ ಹೆದರಿ ಮದ್ಯಕ್ಕೆ ಮೊರೆ ಹೋದ ಜನ
ಸರ್ಕಾರ ಆದೇಶ ನೀಡಿದರೆ ಔಷಧಿಯ ಗುಣಮಟ್ಟ ಹೆಚ್ಚಾಗಲು ಸಾಧ್ಯವೇ? ನಮ್ಮ ತಾಲೂಕಿನಲ್ಲಿರುವ ಇಂಜೆಕ್ಷನ್ಗಳನ್ನು ರೋಗಿಗಳಿಗೆ ಬಳಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೂಡಲೇ ಈ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಲಾಗುವುದು ಎಂದು ಸರ್ಕಾರಕ್ಕೆ ಶಾಸಕ ಸುರೇಶ್‌ಗೌಡ ಎಚ್ಚರಿಕೆ ರವಾನಿಸಿದರು.