ಮಂಡ್ಯ: ಸುಮಲತಾ ಮಾಡಿದ ಸವಾಲನ್ನು ಶಾಸಕ ಪುಟ್ಟರಾಜು ಸ್ವೀಕರಿಸಿದ್ದಾರೆ. ಸುಮಲತಾ ಹೇಳಿದ ದಿನ ನಾನು ಮೇಲುಕೋಟೆಗೆ ಬಂದು ಆಣೆ ಪ್ರಮಾಣ ಮಾಡಲು ಸಿದ್ದ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳಿಂದ ಸಂಸದೆ ಹಾಗೂ ದಳಪತಿಗಳ ನಡುವೆ ನಡೆಯುತ್ತಿರುವ ಮಾತಿನ ಯುದ್ದ ಮತ್ತೊಂದು ಘಟ್ಟ ತಲುಪಿದೆ. ಸಂಸದೆ ಸುಮಲತಾ ಈ ಹಿಂದೆ ಕಮಿಷನ್ ಆರೋಪದಡಿ ಜೆಡಿಎಸ್ ಶಾಸಕರಿಗೆ ಮೇಲುಕೋಟೆಗೆ ಬಂದು ಆಣೆ ಪ್ರಮಾಣ ಮಾಡಲು ಸವಾಲು ಹಾಕಿದ್ದರು. ಇದನ್ನು ಸ್ವೀಕರಿಸಿದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಮೇಲುಕೋಟೆಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಸುಮಲತಾ ಅವರ ಟಾರ್ಗೆಟ್ ಜೆಡಿಎಸ್: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪುಟ್ಟರಾಜು, ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನಾಂಕ ನಿಗದಿ ಮಾಡಿದ್ರೆ ಎಲ್ಲಿಗೆ ಬೇಕಾದರೂ ಬಂದು ಪ್ರಮಾಣ ಮಾಡ್ತೀನಿ. ಜನ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಗೆದ್ದಿದ್ದಾರೆ. ಸುಮಲತಾ ಅವರ ಟಾರ್ಗೆಟ್ ಜೆಡಿಎಸ್. ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಇತಿಹಾಸ ತೆಗೆದು ನೋಡಲಿ. ಮಾತನಾಡುವುದರಿಂದ ದೊಡ್ಡ ಲೀಡರ್ ಆಗುತ್ತೇನೆ ಅಂದುಕೊಂಡಿದ್ದರೆ ಅದನ್ನು ಬಿಟ್ಟು ಬಿಡಿ ಎಂದು ಕಿಡಿಕಾರಿದರು.
ಎಲ್ಲಾ ರಾಜಕಾರಣಿಗಳು ಮುಡಾ ಸೈಟ್ ಪಡೆದಿದ್ದಾರೆ: ಗೌರವದಿಂದ ರಾಜಕಾರಣ ಮಾಡಿ. ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ನಮ್ಮ ಮನೆ ದುಡ್ಡು ಹಾಕಿ ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೆ. ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಅನ್ನೋದನ್ನ ರಾಕ್ ಲೈನ್ ಅವರನ್ನ ಕೇಳಿ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮುಡಾ ಸೈಟ್ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಕೋರ್ಟ್ನಲ್ಲಿ ಕೇಸ್ ಇದೆ. ಜನಪ್ರತಿನಿಧಿಗಳ ನ್ಯಾಯಾಲಯ ಹೊರ ದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ದರೆ ತರಲಿ. ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ ಎಂದರು.
ಅವರ ಕುಟುಂಬವೂ ಮುಡಾ ಸೈಟ್ ಪಡೆದಿದೆ ಅಲ್ವಾ?. ಚುನಾವಣೆ ಬಂದಾಗಲೆಲ್ಲ ಈ ಸೈಟ್ ವಿಚಾರ ತೆಗೆಯುತ್ತಾರೆ. ಇದು ದೊಡ್ಡ ಷಡ್ಯಂತ್ರ. ಚೆಲುವ ನಾರಾಯಣನ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮುಡಾ ಸೈಟ್ ಹಗರಣದಲ್ಲಿ ಎಳ್ಳಷ್ಟೂ ನಮ್ಮ ಪಾತ್ರವಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿದಿದರು.
ಚರ್ಚೆಗೆ ಸಿದ್ಧ: ಅಜಾತ ಶತ್ರು ಅಂಬರೀಶ್ ಅಣ್ಣನ ನೆನೆದು ಸುಮಲತಾ ಕೆಲಸ ಮಾಡಲಿ. ಲಘು ಮಾತು ಅವರಿಗೆ ಶೋಭೆ ತರುವುದಿಲ್ಲ. ನನ್ನ ದುಡಿದ ದುಡ್ಡಿನಿಂದ ನನ್ನ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ನಾನು ಕಳೆದಿದ್ದೆ ಹೆಚ್ಚು. ಅವರ ಬಳಿ ದಾಖಲೆಗಳಿದ್ದರೆ ತಂದು ದಿನಾಂಕ ನಿಗದಿ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದರು.
ನಾನು ಅಧಿಕಾರಕ್ಕೆ, ಕಮಿಷನ್‌ಗೆ ಆಸೆ ಪಟ್ಟಿದ್ದರೆ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ.ಮೈ ಶುಗರ್ ಕಾರ್ಖಾನೆ ಪುನರಾರಂಭ ಬಗ್ಗೆ ರೈತರು ಧರಣಿ ಮಾಡಿದ್ರು. ಆದರೆ ಯಾರು ಯಾರಿಗೆ ಕಾರ್ಖಾನೆ ಮಾರಲು ಹೋಗಿದ್ರು ಅನ್ನೋದು ಗೊತ್ತಿದೆ. ಕೆಆರ್ಎಸ್ ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು. ಯಾರ್ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ ಎಂದರು.
ಇದನ್ನೂ ಓದಿ: ಆಣೆ ಪ್ರಮಾಣಕ್ಕೆ ಬಂದು ನಿಂತ ಸುಮಲತಾ ಹಾಗೂ ಜೆಡಿಎಸ್ ನಾಯಕರ ಮಾತಿನ ಯುದ್ಧ