ಮಂಡ್ಯ : ಶಿಕ್ಷಕರಿಗೆ ಇನ್ನೂ ಲಸಿಕೆಯ ಸೆಕೆಂಡ್ ಡೋಸ್ ಏಕೆ ಕೊಡಿಸಿಲ್ಲ ಎಂದು ಶಾಸಕ ಸಿ.ಎಸ್. ಪುಟ್ಟರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರ ಅಧ್ಯಕ್ಷತೆಯಲ್ಲಿ 9 ಹಾಗೂ 10ನೇ ಭೌತಿಕ ತರಗತಿಗಳು ಆರಂಭವಾಗುವ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪೂರ್ವ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಂಡಿದ್ದಾರೆ.
ಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದ್ದರೂ ಸಹ ಲಸಿಕೆ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿಕಾರಿದರು. ಕುಣಿಯಲಾರದೋರಿಗೆ ನೆಲ ಡೊಂಕು ಎಂಬಂತೆ, ನನಗೆ ಕಥೆ ಹೇಳುವುದನ್ನ ಬಿಡಿ, ಮೊದಲು ಕೆಲಸ ಮಾಡಿ ಎನ್ನುವ ಮೂಲಕ ಶಾಸಕ ಪುಟ್ಟರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 2,529 ಶಾಲೆಗಳು ಇವೆ. ಮೊದಲು ಎಲ್ಲ ಶಿಕ್ಷಕರಿಗೂ ವ್ಯಾಕ್ಸಿನ್ ಕೊಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇನ್ನು, ಶಾಲೆಯನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಿಕ್ಷಕರು ಹಾಗೂ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು ಎಂದು ಸೂಚಿಸಿದರು.
ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯ ಕಾಪಾಡುವಂತೆ ನೈರ್ಮಲ್ಯತೆ ಕಾಪಾಡುವುದು ಬಹಳ ಮುಖ್ಯ. ಹೀಗಾಗಿ, ಶಾಲಾ-ಕಾಲೇಜು ಮುಂಭಾಗ ಯಾವುದೇ ತರಹದ ಐಸ್‌ಕ್ರೀಮ್ ಅಂಗಡಿ ಹಾಗೂ ಇತರೆ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಲು ಶಾಸಕ ಪುಟ್ಟರಾಜು ಪೊಲೀಸ್ ಇಲಾಖೆಗೆ ಸೂಚಿಸಿದರು.
ಇದನ್ನೂ ಓದಿ: ಕಲಬುರಗಿಯ ಹಲವೆಡೆ ಭಾರಿ ಸದ್ದು, ಭೂಕಂಪದ ಅನುಭವ... ಆತಂಕದಲ್ಲಿ ಜನರು
ಶಿಕ್ಷಕರು ಶಾಲೆಗೆ ಬರುವ ಮುನ್ನ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯನ್ನ ಕಡ್ಡಾಯವಾಗಿ ನೀಡಬೇಕು. ಮಕ್ಕಳಿಗೆ ಆಹಾರ ತಯಾರಾಗುವ ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.