ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರ ಬುದ್ಧಿ ಏನು ಎಂದು ಗೊತ್ತಿದೆ. ನಾವು ಏನು ಮಾತನಾಡಿದ್ರೂ ಸುಮಲತಾ ಬಂಡವಾಳ ಮಾಡಿಕೊಳ್ಳುತ್ತಾರೆ. ಕಿತಾಪತಿ-ಜಗಳ ಮಾಡಲೆಂದೇ ಬರುತ್ತಾರೆ. ಅದಕ್ಕೆ ನಾವು ಮಾತನಾಡದೆ ಸುಮ್ಮನಿದ್ದೀವಿ ಎಂದು ನಾಗಮಂಗಲ ಶಾಸಕ ಸುರೇಶಗೌಡ ಲೇವಡಿ ಮಾಡಿದ್ದಾರೆ.
ಶಾಸಕರ ಕೆಲಸವನ್ನೂ ನಾನೇ ಮಾಡುತ್ತಿರುವುದಾಗಿ ಹೇಳಿದ್ದ ಸುಮಲತಾ ಅವರಿಗೆ ಡಿ ಸಿ ತಮ್ಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸುರೇಶ್ ಗೌಡ ಕೂಡ ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. ಬಹಿರಂಗ ಚರ್ಚೆಗೆ ಬರುವಂತೆ ತಮ್ಮಣ್ಣ ಆಹ್ವಾನ ನೀಡಿದ್ದು, ಇದೀಗ ಸುರೇಶ್ ಗೌಡರು, ಸುಮಲತಾ ಅವರೀಗ ಎಲ್ಲಿದ್ದಾರೆ? ಮಂಡ್ಯ ಮನೆಯಲ್ಲಿದ್ದಾರಾ? ಗುದ್ದಲಿ ಪೂಜೆಗಳಿಗೆ ಕರೆಯಲು ನಾನು ಅವರನ್ನೀಗ ಹುಡುಕಾಡುತ್ತಿರುವುದಾಗಿ ವ್ಯಂಗ್ಯವಾಡಿದ್ದಾರೆ.
ಸುಮಲತಾ ಅವರ ಪ್ರಕಾರ ನಾವು ಯಾವ ಶಾಸಕರೂ ಕ್ಷೇತ್ರದಲ್ಲಿ ಇಲ್ಲ. ನಾವು ನಿಷ್ಪ್ರಯೋಜಕರು, ಕ್ಷೇತ್ರಕ್ಕೆ ಯಾವ ಅನುದಾನವನ್ನೂ ತಂದಿಲ್ಲ, ಬಹಳ ಸಂತೋಷ. ಈ ಕುರಿತು ಇನ್ನೊಂದು ವರ್ಷದ ಬಳಿಕ ಜನರೇ ಉತ್ತರಿಸುತ್ತಾರೆ ಎಂದ ಸುರೇಶ್ ಗೌಡ, ಸಂಸದರು ನಮಗೇ ಸಿಗ್ತಿಲ್ಲ, ಇನ್ನು ಜನಸಾಮಾನ್ಯರಿಗೆ ಹೇಗೆ ಸಿಗ್ತಾರೆ? ಎಂದು ಹೇಳಿದ್ದಾರೆ.
ಅವರು ಅವರ ಅಧಿಕಾರ ವ್ಯಾಪ್ತಿ ಅರ್ಥ ಮಾಡ್ಕೊಂಡರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಗೊಂದಲಕ್ಕೆ ಕಾರಣವಾಗುತ್ತೆ. ನಾನು ಒಬ್ಬ ಹೆಣ್ಣು ಮಗಳು, ಸೋದರಿ ಭಾವನೆಯಿಂದ ಸುಮ್ಮನಿದ್ದೇವೆ. ಇವರ ವಿರುದ್ಧ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತಬಹುದು. ಬೇರೆಲ್ಲ ಎಂಪಿ ಹೇಗಿದ್ದಾರೆ? ಇವರು ಈ ರೀತಿ ಮಾಡುತ್ತಾರೆ. ನಾವು ಏನು ಮಾತನಾಡಿದರೂ ನಮ್ಮದೇ ತಪ್ಪು ಅಂತಾ ಬಂಡವಾಳ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ನಮ್ಮ ಕ್ಷೇತ್ರದ ಜನರೇ ಮುಂದೆ ಉತ್ತರ ಕೊಡ್ತಾರೆ ಎಂದು ಹೇಳಿದ್ದಾರೆ.
ನಮ್ಮನ್ನೆಲ್ಲ ಹೊರಗಿಟ್ಟು ದಿಶಾ ಸಭೆ ಮಾಡಿದಾಗಲೇ ಸುಮಲತಾ ಅವರ ಬುದ್ಧಿ ನಮಗೆ ಅರ್ಥವಾಗಿದೆ. ಸರ್ಕಾರದ ನಿಯಮ ಇದೆ, ಅಸೆಂಬ್ಲಿ ನಡೆಯುವ ಸಂದರ್ಭದಲ್ಲಿ ದಿಶಾ ಮೀಟಿಂಗ್ ಅಲ್ಲ, ದರ್ಕಾಸ್ ಮೀಟಿಂಗ್ ಕೂಡ ನಡೆಸುವ ಹಾಗಿಲ್ಲ. ಸರ್ಕಾರವೇ ಸೂಕ್ತ ನಿರ್ದೇಶನ ಕೊಟ್ಟಿದೆ. ದಿಶಾ ಸಭೆಗೆ ನಾವು ಬರಬಾರದು ಅನ್ನೋ ಒಂದು ಕಾರಣಕ್ಕೆ ನಮ್ಮನ್ನು ಬಿಟ್ಟು ಮೀಟಿಂಗ್ ಮಾಡ್ತಾರೆ.
ನಾವು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಬೇಕಾ? ದಿಶಾ ಸಭೆಗೆ ಹೋಗಬೇಕಾ ಎಂದು ಪತ್ರ ಕೊಟ್ಟಿದ್ದೆವು. ಸ್ಪೀಕರ್ ಅವರು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಿ ಅಂತಾ ತಿಳಿಸಿದ್ದರು. ನಾವು ಬಂದರೆ ಸಮಸ್ಯೆ ಬಗ್ಗೆ ನೇರವಾಗಿ ಮಾತನಾಡುತ್ತೇವೆ. ನಾವು ಬರದೆ ಅವರೊಬ್ಬರೇ ಇದ್ದರೆ ಅಧಿಕಾರಿಗಳನ್ನು ಹೆದರಿಸಬಹುದು ಎಂದರು.
ಪ್ರತಾಪ್ ಸಿಂಹ ಹುಷಾರಪ್ಪ ಎಂದ ನಾಗಮಂಗಲ ಶಾಸಕ : ಸಂಸದ ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತಾ ನಾನು ಹೇಳ್ತೀನಿ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾ ಮಾತಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸುರೇಶ್‌ಗೌಡ, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲಸ ಮಾಡಲ್ಲ ಎಂದು ಅವರ ಕ್ಷೇತ್ರದ ಜನರೂ ನನ್ನ ಬಳಿಯೇ ಬರ್ತಾರೆ ಅಂತಾನೂ ಸುಮಲತಾ ಹೇಳ್ತಾರೇನೋ.. ಆದ್ರೆ, ಹುಷಾರಪ್ಪ ಎಂದು ನಾನು ಪ್ರತಾಪ್ ಸಿಂಹಗೆ ಹೇಳ್ತೀನಿ ಎಂದು ಸಂಸದೆ ಸುಮಲತಾರನ್ನು ಲೇವಡಿ ಮಾಡಿದರು.
ಓದಿ : ಥಾಯ್ಲೆಂಡ್ ಆಟಗಾರ್ತಿಯನ್ನು ಮಣಿಸಿ, ಸ್ವಿಸ್ ಓಪನ್ ಸಿಂಗಲ್ಸ್ ಟೈಟಲ್ ಗೆದ್ದ ಪಿ.ವಿ. ಸಿಂಧು