ಮಂಡ್ಯ: ಕುಮಾರಸ್ವಾಮಿ ಬುಟ್ಟಿಲಿ ಹಾವು ಇದೆಯೋ.. ಏನೋ ಗೊತ್ತಿಲ್ಲ, ಆದರೆ ಅಧಿಕಾರ ಇಲ್ಲದೇ ಒದ್ದಾಡುತ್ತಾ ಇದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಗ್ಗೆ ನನ್ನಲ್ಲಿ ಯಾಕೆ ಪ್ರಶ್ನೆ ಕೇಳ್ತೀರಪ್ಪ. ಕುಮಾರಸ್ವಾಮಿ ಅವರನ್ನು ಸ್ವಲ್ಪ ಸಮಾಧಾನವಾಗಿ ಇರಲು ಹೇಳಿ. ಅಧಿಕಾರ ಇಲ್ಲದೇ ಕುಮಾರಸ್ವಾಮಿ ಮೀನಿನ ಹಾಗೆ ಒದ್ದಾಡ್ತಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಅವರ ತಂದೆಯೂ ಪ್ರಧಾನಮಂತ್ರಿ ಹಾಗೂ ಸಿಎಂ ಆಗಿದ್ದಾರೆ. ಅನಾವಶ್ಯಕ ಮಾತನಾಡುತ್ತಾರೆ ಕುಮಾರಸ್ವಾಮಿ. ಅಧಿಕಾರದಲ್ಲಿ ಇದ್ದಾಗ ಅವರ ಕುಟುಂಬದವರು ಏನು ಮಾತಾಡುತ್ತಿರಲಿಲ್ವಾ ಎಂದು ಮರು ಪ್ರಶ್ನೆ ಮಾಡಿದರು.
ಈ ಹಿಂದೆ ಅವರು ಮಾಡಿಲ್ವಾ?: ಯತೀಂದ್ರ ಹಿಂದೆ ಶಾಸಕರಾಗಿದ್ದವರು. ಈಗ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಯತೀಂದ್ರ ಮಂತ್ರಿಗಳಿಗೆ ಸಲಹೆ ಕೊಡಬಾರದು, ನಮ್ಮ ಜೊತೆ ತೊಡಗಿಸಿಕೊಳ್ಳಬಾರದು ಎನ್ನುವುದು ತಪ್ಪು ಎಂದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಷ್ಟು ವರ್ಗಾವಣೆ ಮಾಡಿದ್ರು ಎನ್ನುವುದು ಬಿಡಬೇಕಾ? ವರ್ಗಾವಣೆ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಕ್ರಿಯೆ. ವರ್ಗಾವಣೆ ಆಗಬೇಕು ಅದು ಆಗುತ್ತೆ. ಯಾರು ಏನು ಮಾಡಿದ್ದರು ಎಲ್ಲ ಜನರಿಗೆ ಗೊತ್ತು. ಕುಮಾರಸ್ವಾಮಿ ಅವರ ವಿಚಾರವನ್ನು ನಾವು ಕೆದಕಲು ಹೋಗಲ್ಲ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.
ದಾಖಲೆ ಇದ್ದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿ: ಸಿದ್ದರಾಮಯ್ಯ ಅವರು 135 ಸೀಟ್ ತೆಗೆದುಕೊಂಡು ಗೌರವಯುತವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ 123 ಸೀಟ್ ಗೆದ್ದು ಸರ್ಕಾರ ರಚನೆ ಮಾಡ್ತೀನಿ ಅಂತಾ ಹೇಳಿದ್ರು. ಸರ್ಕಾರ ರಚನೆ ಮಾಡಲಿಲ್ಲ ಅಂದ್ರೆ ಪಕ್ಷವನ್ನು ವಿಸರ್ಜನೆ ಮಾಡ್ತೀನಿ ಎಂದು ಹೇಳಿದ್ರು. ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ, ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ, ಯಾರು ಬೇಡಾ ಅಂದ್ರು. ದಾಖಲೆಗಳನ್ನು ಇಟ್ಟುಕೊಂಡಿದ್ದವರು, ಇನ್ನೂ ಒಂದು ದಾಖಲೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳೋದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ, ಜೆಡಿಎಸ್ ನಲ್ಲಿ ಆ ರೀತಿ ಆಗಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಕುಮಾರಸ್ವಾಮಿ ಮಾತಾಡೋ ಅವಶ್ಯಕತೆ ಇಲ್ಲ. 5 ಗ್ಯಾರಂಟಿ ಸಕ್ಸಸ್ ಫುಲ್ ಆಗಿ ಸರ್ಕಾರ ಮುನ್ನಡೆಯುತ್ತಿದೆ, ಇದರಿಂದಾಗಿ ಅದಕ್ಕೆ ವಿಲ ವಿಲ ಹೊದ್ದಾಡ್ತಿದ್ದಾರೆ ಎಂದು ಟೀಕಿಸಿದರು.
ಹೆಚ್ಡಿಕೆ ಹೋರಾಟಕ್ಕೆ ಯಡಿಯೂರಪ್ಪ ಬೆಂಬಲ ವಿಚಾರ: ಹೌದು, ಅವರು ಸಪೋರ್ಟ್ ಕೊಡಬೇಕಲ್ಲ. ಬಿಜೆಪಿಯವರಿಗೆ ಅದು ಬಿಟ್ಟು ಬೇರೆ ಏನು ದಾರಿಯಿದೆ ಹೇಳಿ. ಯಡಿಯೂರಪ್ಪ ಕುಮಾರಸ್ವಾಮಿಗೆ, ಕುಮಾರಸ್ವಾಮಿಗೆ ಯಡಿಯೂರಪ್ಪ ಸಪೋರ್ಟ್ ಮಾಡದೇ ಬೇರೆ ದಾರಿ ಇಲ್ಲ. ಇಬ್ಬರು ಅಲೈನ್ಸ್ ಆಗ್ತಾರೋ, ಮರ್ಜ್ ಹಾಕ್ತಾರೋ ನನಗೆ ಗೊತ್ತಿಲ್ಲ ಎಂದರು.
ಡಿಕೆಶಿ ಸಿಎಂ ವಿಚಾರ : ಡಿಕೆಶಿ ಸಿಎಂ ಸ್ಥಾನಕ್ಕೆ ಟವಲ್ ಹಾಕಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಏನಾದ್ರು ಟವಲ್ ಹಾಕಿದ್ದೀನಿ ಅಂದ್ರಾ.? ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಬಹಳ ಅನ್ಯೊನ್ಯವಾಗಿದ್ದಾರೆ. ಯಾವುದೇ ಪಕ್ಷದಲ್ಲಿ ಇಷ್ಟೊಂದು ಅನ್ಯೋನ್ಯತೆ ಇಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಆ ವಿಚಾರ ನಿಮಗೇಕೆ, ನೀವೇನಾದ್ರು ಆಡಿಟಿಂಗ್ ಮಾಡ್ತೀರಾ ಅಂದ್ರೆ ಹೇಳ್ತೇನೆ. ವಿರೋಧ ಪಕ್ಷಕ್ಕೆ ಆ ವಿಚಾರ ಯಾಕೆ, ಅವರಿಗೆ ಸಂಬಂಧವಿಲ್ಲ. 5 ವರ್ಷವೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂಓದಿ:ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್ಡಿಕೆ ಸವಾಲ್