ಮಂಡ್ಯ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ನನ್ನದೇ. ಅದು ನಾನು ಮಾತನಾಡಿರುವ ಮಾತುಗಳೇ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಮನ್‌ಮುಲ್‌ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣದ ಆಡಿಯೋ ಬಹಿರಂಗ ವಿಚಾರದ ಕುರಿತು ಸ್ಪಷ್ಟಪಡಿಸಿದ್ದಾರೆ.
ಮಂಡ್ಯದ ಬಸರಾಳು ಗ್ರಾಮದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದ ಅವರು, ಜವರೇಗೌಡರು ಕಾಲ್ ಮಾಡಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಪ್ರಕರಣದ ತನಿಖೆಗೆ ಅಡ್ಡಿಯಾಗಿದ್ದಾರೆ ಎಂದಾಗ, ನಿನಗೂ ಈಗ ಗೊತ್ತಾಯ್ತ ಎಂದು ಅಷ್ಟೇ ಹೇಳಿದ್ದೇನೆ. ತನಿಖೆಗೆ ಕುಟುಂಬವೇ ಅಡ್ಡಿಯಾಗಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದು ತನಿಖೆಯಿಂದ ಮಾತ್ರ ಹೊರಬರಬೇಕಿದೆ ಎಂದು ದೊಡ್ಡಗೌಡರ ಕುಟುಂಬದ ಮೇಲೆ ಕಿಡಿಕಾರಿದರು.
ಇದನ್ನೂ ಓದಿ: ಅಮಾನವೀಯ ಘಟನೆ : ಮಂಡ್ಯದಲ್ಲಿ ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ
ಮುಖ್ಯಮಂತ್ರಿ ಯಾವುದೇ ಹಗರಣವನ್ನು ಸಿಓಡಿಗೆ ನೀಡಲಾಗಿದೆ ಎಂದರೆ ತಕ್ಷಣವೇ ಆದೇಶವಾಗುತ್ತದೆ. ಈ ಹಗರಣ ಸಿಓಡಿಗೆ ಕೊಡ್ತೀವಿ ಎಂದು ಸಿಎಂ ಹೇಳಿದ ಹಲವು ದಿನ ಕಳೆದರೂ ಇನ್ನೂ ಆದೇಶ ಆಗಿಲ್ಲ. ಇದರ ಅರ್ಥ ಏನು? ಯಾರು ಇದನ್ನ ತಡೆ ಹಿಡಿಯುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ದೇವೇಗೌಡ ಕುಟುಂಬದ ಮೇಲೆ ಹರಿಹಾಯ್ದರು.
ಇದು ನೂರು-ಇನ್ನೂರು ಕೋಟಿಯ ಭಾರಿ ಮೊತ್ತದ ಹಗರಣ. 1200 ಬಿಎಂಸಿ ಕೇಂದ್ರಗಳಿಂದ ಬರುವ ಹಾಲಿಗೆ ನೀರು ಬೆರೆಸಿ ವಂಚನೆ ಮಾಡಲಾಗಿದೆ ಎಂದ ಚಲುವರಾಯಸ್ವಾಮಿ, ಕಳೆದ ಬಾರಿಯ ಆಡಳಿತ ಮಂಡಳಿ ಹಗರಣ ನಡೆಸಿದರೂ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ನಾನು ಈಗಿನ ಆಡಳಿತ ಮಂಡಳಿಯನ್ನು ದೂರಲ್ಲ. ಆದ್ರೆ ಇದು ದೊಡ್ಡ ಹಗರಣ ಆಗಿರುವುದರಿಂದ ಸಿಬಿಐ ತನಿಖೆ ಆಗಬೇಕು ಅನ್ನೋದು ನನ್ನ ಒತ್ತಾಯ. ಸೂಪರ್ ಸೀಡ್ ನನಗೆ ಅವಶ್ಯಕತೆ ಇಲ್ಲ. ತಪ್ಪಿತಸ್ಥರಿಂದ ವಂಚನೆ ಹಣ ವಸೂಲಿ ಆಗಬೇಕು ಎಂದು ಒತ್ತಾಯಿಸಿದರು. ನಾನು ಯಾರ ಪರವೂ ಇಲ್ಲ. ಸೂಪರ್ ಸೀಡ್ ಅವಶ್ಯಕತೆ ಇದ್ದರೆ ಮಾಡಲಿ. ಪ್ರಭಾವಿ ನಾಯಕರಿಂದಲೇ ಈ ತನಿಖೆ ನಿಂತಿದೆ ಎಂದು ಪರೋಕ್ಷವಾಗಿ ದೊಡ್ಡಗೌಡರ ಕುಟುಂಬದ ಮೇಲೆ ಆರೋಪ ಮಾಡಿದರು.
ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ವೇಳೆ ತನಿಖೆ ಮಾಡುವಂತೆ ಕುಮಾರಸ್ವಾಮಿ ಹೇಳಿದ್ದರು. ಈಗ ಏಕೆ ಅವರು ಸುಮ್ಮನಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಹೆಚ್ ಡಿ ದೇವೇಗೌಡರು ಹಾಗೂ ಹೆಚ್ ಡಿ ಕುಮಾರಸ್ವಾಮಿ ತನಿಖೆ ನಿಲ್ಲಿಸುವಂತೆ ಮಾತನಾಡಿಲ್ಲ ಎಂದರೆ ಹೇಳಲಿ ಎಂದು ಸವಾಲು ಹಾಕಿದರು. ನನಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ. ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ಜೆಡಿಎಸ್ ಸೀಟುಗಳನ್ನು ಗೆದ್ದಿದ್ದಾರೆ. ಜೆಡಿಎಸ್ ನಾಯಕರು ಈ ಹಗರಣ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ದಳಪತಿಗಳ ವಿರುದ್ಧ ಚಲುವರಾಯಸ್ವಾಮಿ ಮತ್ತೊಮ್ಮೆ ಪರೋಕ್ಷ ಆರೋಪ ಮಾಡಿದರು.
ಕಣ್ಣಲ್ಲಿ ನೀರು ಅಷ್ಟೇ ಅಲ್ಲ, ರಕ್ತವೂ ಬರುತ್ತಿದೆ. ಜನ ಯಾರಿಗೆ ಮತ ಹಾಕುತ್ತಾರೆ ಅನ್ನೋದು ನನಗೆ ಮುಖ್ಯ ಅಲ್ಲ. ಆದರೆ, ಹಗರಣದ ತನಿಖೆ ಹಳ್ಳ ಹಿಡಿಯಬಾರದು ಎಂಬುದಷ್ಟೇ ನನ್ನ ಉದ್ದೇಶ ಎಂದರಲ್ಲದೇ ನಮ್ಮ ಕೈಲಿ ಈಗ ಅಧಿಕಾರ ಇಲ್ಲ. ಆದರೆ, ತನಿಖೆ ನಡೆಸದಿದ್ದರೆ ರೈತರ ಪರ ನಿಲ್ಲುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ: ಮನ್‌ಮುಲ್ ಹಾಲು ಕಲಬೆರಕೆ ಪ್ರಕರಣ : ವೈರಲ್ ಆಡಿಯೋದಲ್ಲೇನಿದೆ? ತನಿಖೆಗೆ ಹೆಚ್ಡಿಕೆ ಅಡ್ಡಿಯಾಗಿದ್ದಾರಾ?
ಪಕ್ಷ ಮುಗಿಸಲು ಸುಫಾರಿ ಪಡೆದು ಕಾಂಗ್ರೆಸ್ ಸೇರಿದ್ದಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ನಮ್ಮ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನನಗೆ ಗೊತ್ತಿದೆ. ನಾನು ಯಾರಿಂದಲೂ ರಾಜಕೀಯ ಕಲಿಯಬೇಕಿಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.