ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಮಂಡ್ಯ ಯೂತ್ ಗ್ರೂಪ್ ಸಂಘಟನೆ ಮುಖಂಡರು ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೆಹರು ನಗರದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬುಧವಾರ ಜಾಥಾ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಕೆಲಕಾಲ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಸೋಲಾಗುತ್ತಿದೆ. ಇದಕ್ಕೆ ರಾಜಕೀಯ ಪಕ್ಷಗಳೇ ಕಾರಣ. ನದಿ ನೀರಿನ ವಿಚಾರದಲ್ಲಿ ಒಗ್ಗಟ್ಟಿನಿಂದ ಹೋರಾಟಕ್ಕಿಳಿಯದಿರುವುದು ನಮ್ಮ ಹಿನ್ನಡೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟ ಪರಿಸ್ಥಿತಿ ಎದುರಾದಾಗ ಸರ್ಕಾರಗಳು ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಕಡೆ ಬೊಟ್ಟು ಮಾಡುವ ಬದಲು ರೈತರ ಹಿತ ಕಾಪಾಡಲು ನಾವು ಹೇಗೆ ಕಾನೂನಾತ್ಮಕ ಹೆಜ್ಜೆ ಇಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕು. ಹವಾಮಾನ ಇಲಾಖೆ ವರದಿಯನ್ನು ಮುಂದಿಟ್ಟುಕೊಂಡು ತಮಿಳುನಾಡು ನೀರಿಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ಮಳೆ ಉತ್ತಮವಾಗಿ ಬಿದ್ದಲ್ಲಿ ಆ ನೀರನ್ನು ತಡೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಮಳೆಯೇ ಬೀಳದಿದ್ದಾಗ ನೀರು ಹರಿಸಿ ಎಂದು ಹೇಳುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಸಂಕಷ್ಟ ಕಾಲದಲ್ಲಿ ಎರಡೂ ರಾಜ್ಯಗಳ ನಡುವೆ ಉದ್ಭವಿಸಿರುವ ಜಲವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೂರಿಸಿ ಸಂಕಷ್ಟ ಸೂತ್ರ ರೂಪಿಸಲು ಆಸಕ್ತಿ ವಹಿಸಬೇಕು. ಕರ್ನಾಟಕ - ತಮಿಳುನಾಡು ರೈತರು ಜಗಳವಾಡುವುದಕ್ಕೆ ಅವಕಾಶ ನೀಡದೇ ಇಬ್ಬರೂ ನೀರನ್ನು ಸಮಾನವಾಗಿ ಹಂಚಿಕೆಯಾಗುವಂತೆ ಸೂತ್ರ ರೂಪಿಸಬೇಕು ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದರು.
ಈಗಾಗಲೇ ತಮಿಳುನಾಡಿಗೆ 13 ಟಿಎಂಸಿ ನೀರು ಹರಿದುಹೋಗಿದೆ. ಇನ್ನು 5 ಸಾವಿರ ಕ್ಯೂಸೆಕ್‌ನಂತೆ ನೀರು ಹರಿದರೆ 7 ಟಿಎಂಸಿ ನೀರು ಖಾಲಿಯಾಗುತ್ತದೆ. ಇದರಿಂದ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಲಿದೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ರೈತರು ಮತ್ತು ಜನರ ಹಿತ ಕಾಪಾಡಬೇಕು ಎಂದರು. ಪ್ರತಿಭಟನೆಯಲ್ಲಿ ಶಾಸಕ ದರ್ಶನ್, ನವೀನ್, ಪ್ರವೀಣ್, ಸೈಯದ್ ಇಮ್ರಾನ್, ಅರ್ಷದ್, ಖಾಸಿಂ, ವಿನಯ್‌ಗೌಡ, ಮಂಜು, ವಿನಯ್, ಪ್ರತಾಪ್, ದೀಪು ಇತರರಿದ್ದರು.
ತಡರಾತ್ರಿಯೂ ರೈತರ ಪ್ರತಿಭಟನೆ: ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮುಂದಿನ 15 ದಿನ ಅಂದರೆ ಸೆಪ್ಟೆಂಬರ್ 2 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಮಧ್ಯಂತರ ಆದೇಶ ನೀಡಿ ಸೂಚಿಸಿತ್ತು. ಇದನ್ನು ಖಂಡಿಸಿ ರೈತರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಹಿತ ರಕ್ಷಣಾ ಸಮಿತಿಯಿಂದ ನಡೆಯಲಿದೆ ಪ್ರತಿಭಟನಾ ಧರಣಿ: ಹಿತ ರಕ್ಷಣಾ ಸಮಿತಿ ಇಂದಿನಿಂದ ಪ್ರತಿಭಟನಾ ಧರಣಿ ನಡೆಸೋದಲ್ಲದೇ, ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ಕರೆಕೊಟ್ಟಿದೆ. ವಿವಿಧ ಸಂಘಟನೆಗಳಿಂದ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, KRS ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಯಾವುದೇ ಕಾರಣಕ್ಕೂ ನೀರು ಬಿಡಬಾರದು, ಇಲ್ಲಿಯ ರೈತರಿಗೇ ನೀರಿಲ್ಲ. ಅಂತಹದರಲ್ಲಿ ಹೇಗೆ ತಮಿಳುನಾಡಿಗೆ ನೀರು ಬಿಡೋದು ಎಷ್ಟು ಸರಿ ಅಂದಿದ್ದಾರೆ. ಬೆಂಗಳೂರಿಗರು x ಖಾತೆ( ಟ್ವಿಟರ್) ಮೂಲಕ ಕಾವೇರಿ ನೀರಿಲ್ಲ ಅಂತ ಹ್ಯಾಶ್ ಟಾಗ್ ಹಾಕಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಶಿರಸಿ ಪೂರ್ವ ಭಾಗದಲ್ಲಿ ಬರಗಾಲಕ್ಕೆ ಬಲಿಯಾದ ಭತ್ತ, ಮೆಕ್ಕೆ ಜೋಳ : ಮಮ್ಮಲ ಮರುಗುತ್ತಿರುವ ರೈತರು