ಮಂಡ್ಯ: ಡಾ. ವಿವೇಕ್ ಮೂರ್ತಿ ಅವರು ಹುಟ್ಟಿದ್ದು ಲಂಡನ್ನಲ್ಲಿ, ಬೆಳೆದಿದ್ದು ಅಮೆರಿಕದಲ್ಲಿ. ಆದ್ರೆ ತಮ್ಮ ಕುಟುಂಬಸ್ಥರ ಹುಟ್ಟೂರಾದ ಜಿಲ್ಲೆಯ ಹಲ್ಲೆಗೆರೆಯನ್ನು ಎಂದಿಗೂ ಮರೆತಿಲ್ಲ, ಮರೆಯುವುದಿಲ್ಲ ಎಂದು ಗ್ರಾಮಸ್ಥರು ಡಾ. ವಿವೇಕ್ ಮೂರ್ತಿ ಅವರ ಬಗ್ಗೆ ಗುಣಗಾನ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಪ್ರತಿಸ್ಪರ್ಧಿ ಜೋ ಬೈಡನ್ ಅವರು ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೆ, ಅದರ ಶ್ರೇಯಸ್ಸನ್ನು ಹಂಚಿಕೊಳ್ಳುವ ತಂಡದಲ್ಲಿ ಮಂಡ್ಯ ಜಿಲ್ಲೆಯ ಡಾ. ವಿವೇಕ್ ಹೆಚ್. ಮೂರ್ತಿ ಕೂಡ ಒಬ್ಬರಾಗಿರುತ್ತಾರೆ. ಹೌದು, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ನಡುವೆ ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ಹೆಸರು ಸಹ ಕೇಳಿ ಬರುತ್ತಿದೆ.
ಡಾ. ವಿವೇಕ್ ಮೂರ್ತಿ ತನ್ನ ಹುಟ್ಟೂರಿನೊಂದಿಗೆ ಉತ್ತಮ ಬಾಂಧವ್ಯವನ್ನ ಹೊಂದಿದ್ದಾರೆ. ಇವರು ತೋರುತ್ತಿರುವ ಕಾಳಜಿಯಿಂದ, ನೀಡುತ್ತಿರುವ ಸಹಕಾರದಿಂದ ಗ್ರಾಮಸ್ಥರು ಇವರ ಮೇಲೆ ಅಪಾರ ಕಾಳಜಿ ವ್ಯಕ್ತಪಡಿಸುತ್ತಾರೆ. ಇವರ ವ್ಯಕ್ತಿತ್ವದಿಂದ 'ಹಲ್ಲೆಗೆರೆ' ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ ಎಂದು ಅವರನ್ನು ಕೊಂಡಾಡುತ್ತಿದ್ದಾರೆ.
ಸೊಸೈಟಿ ಆಫ್ ಚಿಲ್ಡ್ರನ್ ಆಫ್ ಪ್ಲಾನೆಟ್ ಅಥರ್(ಸ್ಕೋಪ್) ಪ್ರತಿಷ್ಠಾನದ ಮೂಲಕ ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಅಲ್ಲದೇ ಹಲ್ಲೆಗೆರೆಯಲ್ಲಿ ಸರ್ವಧರ್ಮ ಸಮನ್ವಯ ಕೇಂದ್ರವಾಗಿ 'ಮದರ್ ಆಫ್ ಅಥ್೯' (ಭೂಮಂಡಲ ಆರಾಧನಾ ಕೇಂದ್ರ) ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಇವರ ಅಜ್ಜ ಹೆಚ್.ಟಿ. ನಾರಾಯಣಶೆಟ್ಟರು ವಾಸವಾಗಿದ್ದ ಹಂಚಿನ ಮನೆ ಹಾಗೂ ತಂದೆ ಡಾ. ಹೆಚ್. ಎನ್. ಲಕ್ಷ್ಮೀನರಸಿಂಹ ಮೂರ್ತಿ, ತಾಯಿ ಮೈತ್ರೇಯಿ ವಾಸಿಸಿದ್ದ ಮನೆಗಳು ಈಗಲೂ ಗ್ರಾಮದಲ್ಲಿವೆ. ಸಂಬಂಧಿಕರು ಯಾವಾಗಲಾದರೂ ಒಮ್ಮೆ ಮನೆ ಬಾಗಿಲು ತೆರೆಯುತ್ತಾರೆ. ವಿವೇಕ್ ಮೂರ್ತಿ ಅವರು ಗ್ರಾಮಕ್ಕೆ ಬಂದರೆ ಹಬ್ಬದ ಸಡಗರ ಮನೆ ಮಾಡುತ್ತದೆ. ಅಂತಹ ವ್ಯಕ್ತಿತ್ವ ಇವರದ್ದಾಗಿದೆ ಎನ್ನುತ್ತಾರೆ ಇಲ್ಲಿನ ಜನ.
ಮಂಡ್ಯದಲ್ಲಿದೆ ಜೋ ಬೈಡನ್ ಪ್ರಚಾರದ ತಂತ್ರಗಾರ ವಿವೇಕ್ ಮೂರ್ತಿ ನಿವಾಸ
ಲಂಡನ್ನಲ್ಲಿ ಹುಟ್ಟಿ, ಅಮೆರಿಕದಲ್ಲಿ ಬೆಳೆದಿರುವ ವಿವೇಕ್ ಹೆಚ್. ಮೂರ್ತಿ, ಹಾರ್ವಡ್ ವಿವಿಯಿಂದ ಬಿ.ಎ, ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಿಂದ ಎಂಬಿಎ, ಯೇಲ್ ಸ್ಕೂಲ್ ಆಫ್ ಮೆಡಿಸಿನ್ನಿಂದ ಎಂಡಿ ಶಿಕ್ಷಣ ಪಡೆದಿದ್ದಾರೆ. ಬರಾಕ್ ಒಬಾಮ ಸ್ಫರ್ಧಿಸಿದ್ದ 2008 ಮತ್ತು 2012ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇವರು ಪ್ರಚಾರಕರಾಗಿದ್ದರು. ಅಲ್ಲದೇ ಒಬಾಮಾಗೆ ಸರ್ಜನ್ ಕೂಡ ಆಗಿದ್ದರು. ಇನ್ನೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆದ್ದರೆ ವಿವೇಕ್ ಮೂರ್ತಿಗೆ ಅಲ್ಲಿ ಮತ್ತೊಂದು ಉತ್ತಮ ಸ್ಥಾನ ಒಲಿಯಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರದ್ದಾಗಿದೆ.