ಮಂಡ್ಯ: ಕೊರೊನಾ ಲಾಕ್ಡೌನ್ ಸಂದರ್ಭ ಜೀವನ ನಿರ್ವಹಣೆಗೆ ಹಲವರು ಕಳ್ಳತನ ಮಾಡುವ ದುರ್ಮಾರ್ಗ ಆಯ್ಕೆಮಾಡಿಕೊಂಡಿದ್ದರು. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆ ಗ್ಯಾಂಗ್ ಮಂಡ್ಯ ಜನರಲ್ಲಿ ಆತಂಕ ಹುಟ್ಟಿಸಿದ್ರೆ, ಪೊಲೀಸರಿಗೆ ತಲೆನೋವಾಗಿ ಪರಿಣಸಿದ್ದರು.
ಮದ್ದೂರು ಮಟ್ಟಣದ ನಿವಾಸಿಗಳಾದ ಮದ್ದೂರು ಮೂಲದ ರೂಹಿದ್ ಪಾಷ, ಅಶುಪಾಷ, ಇಮ್ರಾನ್ ಖಾನ್, ಮತೀನ್ವುಲ್ಲಾ ಖಾನ್ ಹಾಗೂ ರಾಮನಗರದ ನೂರ್ ಅಹಮದ್ ಬಂಧಿತ ಆರೋಪಿಗಳು.
ಮದುವೆ ಸೇರಿ ಶುಭ ಕಾರ್ಯಗಳಿಗೆ ತೆರಳುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು. ಇವರ ಹಾವಳಿಗೆ ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿತ್ತು. ಇನ್ನೊಂದೆಡೆ ಪೊಲೀಸರ ಮೇಲೂ ಒತ್ತಡ ಹೆಚ್ಚಾಗಿತ್ತು.
ಈ ಗ್ಯಾಂಗ್ ಹೆಡೆಮುರಿ ಕಟ್ಟೋದಕ್ಕೆ ಮಂಡ್ಯ ಎಸ್ಪಿ ಡಾ. ಅಶ್ವಿನಿ ವಿಶೇಷ ತಂಡ ರಚಿಸಿದ್ದರು. ಕೊನೆಗೂ ಐವರು ಸರಗಳ್ಳರನ್ನ ಬಂಧಿಸಿದ್ದು, 3.55 ಲಕ್ಷ ರೂ. ನಗದು, 250 ಗ್ರಾಂ. ನ ಚಿನ್ನದ ಸರಗಳು ಹಾಗೂ 2 ಬೈಕ್ ಜಪ್ತಿ ಮಾಡಿದ್ದಾರೆ.
ಇನ್ನು, ಬಂಧಿತ ಆರೋಪಿಗಳೆಲ್ಲರೂ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸಗಾರರು. ಕೊರೊನಾ ವಕ್ಕರಿಸಿದ ಬಳಿಕ ಇವರೆಲ್ಲರೂ ಕೆಲಸ ಕಳೆದುಕೊಂಡಿದ್ದರು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಈ ಆರೋಪಿಗಳು ಕಳ್ಳತನದ ದಾರಿ ಹಿಡಿದಿದ್ದರು. ಅದರಂತೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುವ ಮೂಲಕ ಸುಲಭವಾಗಿ ಹಣಗಳಿಸಲು ಆರಂಭಿಸಿ ಬಳಿಕ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು.
ಇದನ್ನೂ ಓದಿ: ಡ್ರಾಪ್ ಕೇಳಿ ಬೈಕ್ ಸವಾರನ ಸರ ಎಗರಿಸಿದ ಸರಗಳ್ಳರು ಅಂದರ್
ಮಹಾಮಾರಿಯ ಹೊಡೆತಕ್ಕೆ ಕೆಲಸ ಕಳೆದುಕೊಂಡ ಈ ತಂಡ ನ್ಯಾಯಯುತವಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸದೆ ಸುಲಭ ಮಾರ್ಗವೆಂದು ಕಳ್ಳತನಕ್ಕಿಳಿದು, ಇದೀಗ ಕಂಬಿ ಎಣಿಸುತ್ತಿದ್ದಾರೆ.