ಮಂಡ್ಯ : ಎಲ್ಲೇ ಹೋದ್ರೂ, ಯಾರ ಬಳಿಯೇ ಕೇಳಿದ್ರೂ ಈಗ ಕೊರೊನಾದ್ದೇ ಮಾತು. ಕೋವಿಡ್ನಿಂದಾದ ಸಾವು-ನೋವಿನ ಪ್ರಮಾಣ ಬಹಳ. ಇತ್ತ ರೋಗಿಗಳಿಗೆ ಚಿಕಿತ್ಸೆ ನೀಡುವವರು ಸಹ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ಇದನ್ನ ಗಮನಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೋವಿಡ್ ಚಿಕಿತ್ಸೆ ಮಾಡುವುದಕ್ಕೆ ಮೆಡಿಕಲ್ ವೈ-ರೋಬೋಟ್ ಕಂಡು ಹಿಡಿದು ವಿಶ್ವದ ಗಮನ ಸೆಳೆದಿದ್ದಾನೆ.
ಈ ರೋಬೋ ಕಂಡು ಹಿಡಿದಿರುವ ವಿದ್ಯಾರ್ಥಿ ಹೆಸರು ಮಣಿಕಂಠ ಸವದತ್ತಿ. ಈತ ಮೂಲತಃ ಹುಬ್ಬಳ್ಳಿಯವನಾದ್ರೂ ಸಹ ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ 5ನೇ ಸೆಮಿಸ್ಟರ್ ಪದವಿ ಕಲಿಯುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಸಾಧನೆ ಮಾಡಿದ್ದಾನೆ.
ಐಇಇಇ ಇಂಡಿಯಾ ಕೌನ್ಸಿಲ್ ಸಂಸ್ಥೆಯು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಪ್ರಾಜೆಕ್ಟ್ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಪ್ಲಾನ್ಗೆ ಸಂಬಂಧಿಸಿ ವರದಿ ಕಳುಹಿಸಿ ಕೊಡುವಂತೆ ಸೂಚಿಸಿತ್ತು. ವಿದ್ಯಾರ್ಥಿ ಮಣಿಕಂಠ ಸವದತ್ತಿಯು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ರೋಬೋ ಕುರಿತ ವರದಿಯನ್ನು ಕಳುಹಿಸಿದ್ದ.
ವರದಿಯನ್ನು ನೋಡಿದ್ದ ಸಂಸ್ಥೆಯು ಪ್ರಾಜೆಕ್ಟ್ ಸಿದ್ಧಗೊಳಿಸುವಂತೆ ಅದರ ವೆಚ್ಚಕ್ಕಾಗಿ 12 ಸಾವಿರ ರೂಪಾಯಿ ಕೊಟ್ಟಿತ್ತು. ಅದನ್ನು ಬಳಸಿಕೊಂಡು ಸಿ ಪ್ರೋಗ್ರಾಂ ಬಳಸಿ ಈ ವೈ-ರೋಬೋ ಕಂಡು ಹಿಡಿದಿದ್ದೇನೆ. ಆರೋಗ್ಯ ಸಿಬ್ಬಂದಿಗೆ ನೆರವಾಗಲೆಂದು ಇದನ್ನು ಮಾಡಿದ್ದೇನೆಂದು ವಿದ್ಯಾರ್ಥಿ ಮಣಿಕಂಠ ಸವದತ್ತಿ ತಿಳಿಸಿದ್ಧಾರೆ.
ವೈ ರೋಬೋವನ್ನು ಮೊಬೈಲ್ ಬಳಸಿ ನಿಯಂತ್ರಿಸಬಹುದು. ಅದು ಕೋವಿಡ್ ರೋಗಿಯ ಬಳಿಗೆ ಹೋಗಿ ಅವರಿಗೆ ಬೇಕಾಗಿರುವ ಔಷಧಿ, ಮಾತ್ರೆಗಳನ್ನು ವಿತರಣೆ ಮಾಡುತ್ತದೆ. ಅಲ್ಲದೇ ರೋಗಿಗೆ ಸೂಚನೆಗಳನ್ನು ನೀಡಿ ಅವರ ಹೃದಯ ಬಡಿತ, ಅವರ ದೇಹದ ಉಷ್ಣತೆಗಳನ್ನು ಮಾಪನ ಮಾಡುತ್ತದೆ. ನಂತರ ನಿಮಗೆ ಧನ್ಯವಾದಗಳು ಆದಷ್ಟು ಬೇಗ ಗುಣಮುಖರಾಗಿ ಎಂದು ಹಾರೈಸಿ ಹಿಂದಿರುಗುತ್ತದೆ.
ವಾರ್ಡ್‍ಗಳಿಂದ ಹಿಂದಿರುಗುವ ಈ ವೈ-ರೋಬೋ ಬ್ಲೂರೇಸ್‌ಗಳಿಂದ ತನ್ನ ಇಡೀ ಬಾಡಿಯನ್ನು ಸ್ಕ್ಯಾನ್ ಮಾಡಿಕೊಂಡು ತನ್ನ ದೇಹವನ್ನು ರಕ್ಷಣೆ ಮಾಡಿಕೊಳ್ಳುತ್ತದೆ. ಇಂತಹ ವಿಶೇಷ ರೋಬೋವನ್ನು ಕಂಡು ಹಿಡಿದಿರುವುದಕ್ಕೆ ಐಜೆಡಬ್ಲ್ಯೂಎಂಟಿ ಸಂಸ್ಥೆಯೂ ಇವರಿಂದ ಸಂಶೋಧನಾ ಲೇಖನ ಬರೆಸಿ ಅದನ್ನು ಪ್ರಕಟಿಸಿದೆ. ಜತೆಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ. ಮಗನ ಈ ಸಾಧನೆಯಿಂದ ನಮಗೆ ಬಹಳ ಖುಷಿಯಾಗಿದೆ ಎಂದು ತಂದೆ ಅಮರೇಶ್ ಸವದತ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.
ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಣಿಕಂಠ ಸವದತ್ತಿ ವೈರೋಬೋಟ್ ಕಂಡು ಹಿಡಿದಿದ್ದಾರೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಇದನ್ನು ಅಪ್ಗ್ರೇಡ್ ಮಾಡುವ ಜತೆಗೆ ಇದಕ್ಕೆ ರೂಪ ನೀಡಿದ್ರೆ ವೈದ್ಯಕೀಯ ಲೋಕಕ್ಕೆ ಕೊಡುಗೆಯಾಗೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಜಿಪಂ ಅಧ್ಯಕ್ಷರ ಹೆಸರಿನಲ್ಲಿ ಸಿಬ್ಬಂದಿಗೆ ಆವಾಜ್ : ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡುವಂತೆ ವೈದ್ಯರ ಸಲಹೆ