ಮಂಡ್ಯ : ಯುಗಾದಿ ಹಬ್ಬದಂದು ಯಾರಾದರೂ ಜೂಜಾಟದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಂಡ್ಯ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾದ್ಯಂತ ಯುಗಾದಿ ಹಬ್ಬದ ವೇಳೆಯಲ್ಲಿ ಕ್ಲಬ್, ಮನೆ, ಹೋಟೆಲ್, ಗದ್ದೆ ಬಯಲು ಇನ್ನಿತರ ಸ್ಥಳಗಳಲ್ಲಿ ಜೂಜಾಟ ನಡೆಯುವ ಬಗ್ಗೆ ದೂರುಗಳು ಬಂದಿವೆ.
ಜೂಜಾಟ ಕಾನೂನು ಬಾಹಿರವಾಗಿದ್ದು, ನಿಯಮ ಮೀರಿ ಜೂಜಾಟದಲ್ಲಿ ಪಾಲ್ಗೊಂಡರೆ ಅಂತವರ ವಿರುದ್ಧ ಇಲಾಖೆ ಕಠಿಣ ಕಾನೂನು ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಜೂಜಾಟಕ್ಕೆ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲೂ ಜೂಜಾಟಕ್ಕೆ ಅವಕಾಶ ನೀಡಿಲ್ಲ.
ಈ ವರ್ಷವೂ ಕೂಡ ಪೊಲೀಸ್ ಇಲಾಖೆಯಿಂದ ಅದೇ ರೀತಿ ಕ್ರಮಕೈಗೊಂಡಿದ್ದೇವೆ. ನಾಳೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತಿದ್ದು, ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಈ ವರ್ಷ ಜೂಜಾಟದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ 45 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವರ್ಷ 360 ಪ್ರಕರಣಗಳನ್ನು ದಾಖಲು ಮಾಡಿ ಜೂಜುಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜೂಜಾಟದಲ್ಲಿ ತೊಡಗಿರುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಕೋರಿದ್ದಾರೆ.
ಓದಿ: ಹುಬ್ಬಳ್ಳಿಗೆ 'ಡಸ್ಟ್ ಸಿಟಿ' ಕುಖ್ಯಾತಿ : ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ರಾಜ್ಯದ ಮೊದಲ ನಗರ