ಮಂಡ್ಯ: ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ತವರಿಗೆ ಮರಳಿದ ಡಿ.ಕೆ.ಸತೀಶ್ ಎಂಬ ನಿವೃತ್ತ ಯೋಧನಿಗೆ ಸಕ್ಕರೆ ನಗರಿಯ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.
ತಾಲೂಕಿನ ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಬಳಿಕ ನಾಗರಿಕರ ವೇದಿಕೆ ವತಿಯಿಂದ ಬೆಳ್ಳಿ ರಥದಲ್ಲಿ ನಿವೃತ್ತ ಯೋಧ ಸತೀಶ್ರನ್ನು ಸುಮಾರು ಕಿಲೋ ಮೀಟರ್ವರೆಗೂ ಮೆರವಣಿಗೆ ಮಾಡಿದ್ದು, ವಿವೇಕಾನಂದ ರಸ್ತೆ, ಅಂಬೇಡ್ಕರ್ ರಸ್ತೆ, ಬನ್ನೂರು ರಸ್ತೆ ಮೂಲಕ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿಯದ್ದಕ್ಕೂ ನಾಗರಿಕರು ಸತೀಶರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತ ಸೈನಿಕನಿಗೆ ಗೌರವ ಸಲ್ಲಿಸಿದರು.