ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಇಂದು ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬಳಿಕ ಅದೇ ರೈಲ್ವೆ ನಿಲ್ದಾಣದಿಂದ ಮೈಸೂರಿನಿಂದ ತಿರುಚಿಗೆ ಹೋಗುತ್ತಿದ್ದ ಮೈಲಾಡುತುರೈ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದರು.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈಲಿನಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರ ಸಮಸ್ಯೆ ಆಲಿಸಲು ಹೋಗುತ್ತಿದ್ದೇನೆ. ಇದೇನು ಮೊದಲಲ್ಲ. ಆದರೆ ಸಂಸದರಾದ ಬಳಿಕ ಮೊದಲ ಪ್ರಯಾಣ. ಬೆಂಗಳೂರಿನಲ್ಲಿ ನಡೆದ ರೈಲ್ವೆ ಸಭೆಯಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ಚರ್ಚೆ ಆದ ಪ್ರಕಾರ ಸಮಸ್ಯೆ ಆಲಿಸಲು ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿದರು.
ಇನ್ನು ರೈಲ್ವೆ ನಿಲ್ದಾಣದ ಅಧಿಕಾರಿಗಳು ಸಂಸದರಿಗೆ ಸಾಥ್ ನೀಡಿದ್ದು, ಕೆಲ ಸಮಸ್ಯೆಗಳ ಬಗ್ಗೆಯೂ ಮಾಹಿತಿ ನೀಡಿದರು. ಇತ್ತ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಹುಬ್ಬಳಿಯಲ್ಲಿ ನಡೆದ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ರೈಲ್ವೆ ನಿಲ್ದಾಣದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ.