ಮಂಡ್ಯ: ಜೆಡಿಎಸ್ ಶಾಸಕ ನಾರಾಯಣಗೌಡರ ರಾಜೀನಾಮೆಯಿಂದ ಜೆಡಿಎಸ್ ಕಾರ್ಯಕರ್ತರು ಫುಲ್ ಆಕ್ಟೀವ್ ಆಗಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಿದರೆ ಸೂಕ್ತ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.
ಕ್ಷೇತ್ರದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಬಿಸಿ ಬಿಸಿ ಚರ್ಚೆ ಮಾಡಿದ್ದಾರೆ. ಮುಖಂಡರಾದ ರಾಜಹುಲಿ ದಿನೇಶ್, ಬಸ್ ಕೃಷ‍್ಣೇಗೌಡ, ವೆಂಕಟ ಸುಬ್ಬೇಗೌಡ ಸೇರಿದಂತೆ ಹಲವರು ಸಭೆ ಸೇರಿ ಅಭ್ಯರ್ಥಿ ವಿಚಾರವಾಗಿ ಬಿಸಿ ಬಿಸಿ ಚರ್ಚೆ ಮಾಡಿದ್ದಾರೆ. ಸ್ಥಳೀಯವಾಗಿ ಯಾರು ಸ್ಪರ್ಧೆ ಮಾಡಬೇಕು ಎಂಬ ವಿಚಾರವಾಗಿಯೂ ಚರ್ಚೆ ನಡೆದಿದೆ. ಈಗಾಗಲೇ ಜೆಡಿಎಸ್ ಯುವ ಘಟಕದ ಅಧ‍್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿ ಎಂಬ ಒತ್ತಾಯ ಜೆಡಿಎಸ್ ವಲಯದಲ್ಲಿ ಕೇಳಿ ಬಂದಿದೆ.
ಈ ಮುಂಚೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಎಚ್ಚರಿಕೆ ನೀಡಿ, ನಿಖಿಲ್ ಸ್ಪರ್ಧೆ ಮಾಡಿದರೆ ಲೋಕ ಸಮರದ ತೀರ್ಪು ಮತ್ತೆ ರಿಪೀಟ್ ಆಗಲಿದೆ ಎಂದಿದ್ದರು. ಒಂದೊಮ್ಮೆ ನಿಖಿಲ್ ಸ್ಪರ್ಧೆ ಮಾಡಿದರೆ ಒಗ್ಗಟ್ಟಿನಿಂದ ಹೋರಾಟ ಮಾಡಲು ತೀರ್ಮಾನ ಮಾಡಿದ್ದು, ನಿಖಿಲ್ ಸ್ಪರ್ಧೆ ಮಾಡದೇ ಇದ್ದರೆ ಒಕ್ಕೂರಲಿನಿಂದ ವರಿಷ್ಠರು ಆಯ್ಕೆ ಮಾಡಿದ ಅಭ್ಯರ್ಥಿ ಪರ ಕೆಲಸ ಮಾಡಲು ತೀರ್ಮಾನ ಮಾಡಲಾಗಿದೆ. ಇತ್ತ ಶಾಸಕ ಕೆ.ಸಿ.ನಾರಾಯಣಗೌಡರ ಪರವಾಗಿಯೂ ಕೆಲವು ಬೆಂಬಲಿಗರು ಸಭೆ ಮಾಡಿದ್ದಾರೆ. ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ನಿರ್ವಹಿಸುವುದಾಗಿ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.