ಮಂಡ್ಯ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ವೃದ್ಧರು ಹುಮ್ಮಸ್ಸಿನಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ತಾಲೂಕಿನ ಹನಕೆರೆ ಗ್ರಾಮ ಪಂಚಾಯಿತಿಯಲ್ಲಿ ಶತಾಯುಷಿ ನಿಂಗಮ್ಮ ಎಂಬುವರು ತಮ್ಮ ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಸ್ವತಃ ಅವರೆ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಎಲ್ಲರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಪಕ್ಷತೀತವಾದ ಮೊದಲ ಹಂತದ ಗ್ರಾ.ಪಂ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ: ಶಾಸಕ ಶ್ರೀನಿವಾಸ್
ತಮ್ಮ ಗ್ರಾಮವಾದ ಹನಕೆರೆ ಗ್ರಾಮ ಪಂಚಾಯಿತಿಯಲ್ಲಿ ಮತದಾನ ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್ ಅವರು, ನನ್ನ ಕ್ಷೇತ್ರದಲ್ಲಿ ಯಾವುದೇ ಘರ್ಷಣೆ ಇಲ್ಲದೇ ಶಾಂತ ರೀತಿಯಿಂದ ಮತದಾನ ನಡೆಯುತ್ತಿದೆ. ಎಲ್ಲರೂ ಮುಕ್ತ ಮನಸ್ಸಿನಿಂದ ಮತ ಚಲಾಯಿಸುತ್ತಿದ್ದಾರೆ. ಮತದಾನ ಅಮೂಲ್ಯವಾದ ಹಕ್ಕು, ಮತವನ್ನು ತಿರಸ್ಕರಿಸಬೇಡಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಮಾತನಾಡಿ, ಇದು ಹಳ್ಳಿಗಳ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ. ಗ್ರಾಮ ಪಂಚಾಯಿತಿ ಚುನಾವಣೆ ಅತಿಮುಖ್ಯವಾದದ್ದು ಪಕ್ಷಾತೀತವಾಗಿ ಚುನಾವಣೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.