ಮಂಡ್ಯ: ವಿದ್ಯಾರ್ಥಿ ನಿಲಯದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಕೋಲು ಮತ್ತು ಕಸಬರಿಕೆ ಹಿಡಿದು ಹಿಗ್ಗಾ - ಮುಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದಿದೆ ಎನ್ನಲಾಗಿದೆ. ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ನಿತ್ಯ ಲೈಗಿಂಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಒಟ್ಟಾಗಿ ಸೇರಿ ಮುಖ್ಯ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕನಾಗಿದ್ದ ವ್ಯಕ್ತಿಗೆ ಅಲ್ಲಿದ್ದ ವಿದ್ಯಾರ್ಥಿನಿಯರ ವಸತಿ ನಿಲಯದ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್‍ಗೆ ಬರುತ್ತಿದ್ದ ಮುಖ್ಯ ಶಿಕ್ಷಕ ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ ಅಶ್ಲೀಲ ವಿಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದೂ ದೂರಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಯಾರಿಗಾದ್ರೂ ಹೇಳಿದ್ರೆ ಟಿಸಿಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಅಲ್ಲಿನ ಮಕ್ಕಳು ಆರೋಪಿಸಿದ್ದಾರೆ.
ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸಿಡಿದೆದ್ದಿದ್ದಾರೆ. ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕೊಠಡಿಗೆ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಾಗ ಉಳಿದ ವಿದ್ಯಾರ್ಥಿನಿಯರು ನೆರವಿಗೆ ಬಂದಿದ್ದಾರೆ. ಮುಖ್ಯ ಶಿಕ್ಷಕನನ್ನು ಬೆನ್ನತ್ತಿ ಕೋಲು ಮತ್ತು ಕಸಬರಿಕೆಯಿಂದ ಬಾರಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಸ್ಟೆಲ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಬಳಿಕ ಆರೋಪಿ ಮುಖ್ಯಶಿಕ್ಷಕನನ್ನು ಕೆಆರ್‌ಎಸ್ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಿಲಯ ಪಾಲಕಿ ನೀಡಿದ ದೂರು ಆಧರಿಸಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಸಿಗರೇಟ್ ಹಣ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿ ಹಲ್ಲೆ: ಮೂವರ ಬಂಧನ