ಮಂಡ್ಯ: ಜಿಲ್ಲೆಯಲ್ಲಿ ಒಂದೆಡೆ ಬೆಳೆ ರಕ್ಷಣೆಗೆ ರೈತರು ಹೋರಾಟದ ಹಾದಿ ಹಿಡಿದಿದ್ದರೆ, ಇನ್ನೊಂದೆಡೆ ಕೆರೆ ನೀರನ್ನು ಉಳಿಸಿಕೊಳ್ಳಲು ಮತ್ತೊಂದು ರೈತರ ಗುಂಪು ಹೋರಾಟ ಶುರು ಮಾಡಿದೆ.
ಮದ್ದೂರಮ್ಮ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿವ ನೀರು ಯೋಜನೆ ಜಾರಿಯಿಂದ ಕೆರೆ ನೀರು ಖಾಲಿ ಆದರೆ, ರೈತರ ಗೋಳು ಕೇಳುವವರು ಯಾರು ಎಂದು ಪ್ರಶ್ನೆ ಎತ್ತಿರುವ ಮದ್ದೂರು ತಾಲೂಕಿನ ರೈತರು ಹೋರಾಟ ಪ್ರಾರಂಭಿಸಿದ್ದಾರೆ.
ಮದ್ದೂರಮ್ಮ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಮದ್ದೂರು ಪಟ್ಟಣದ ನರಸಿಂಹಸ್ವಾಮಿ ದೇವಾಲಯದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಜಾಥಾ ನಡೆಸಿದರು. ಮೈಸೂರು - ಬೆಂಗಳೂರು ಹೆದ್ದಾರಿ ತಡೆದು, ಯೋಜನೆ ಜಾರಿಗೊಳಿಸಲು ಮುಂದಾಗಿರುವ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.