ಮಂಡ್ಯ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ಕೆ.ಸಿ.ನಾರಾಯಣಗೌಡರ ಸ್ಥಾನವೂ ಹೋಗಿದೆ. ಇದೀಗ ಮುಂದಿನ ಸಚಿವ ಸಂಪುಟದಲ್ಲಿ ಅವರು ಸಚಿವರಾಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆಗಳು ಮೂಡಿವೆ.
ಕೆ.ಸಿ.ನಾರಾಯಣಗೌಡ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಗೆ ಬಿಎಸ್ಪಿ ಪಕ್ಷದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ನಂತರ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು. ಆದರೆ, ಜೆಡಿಎಸ್‌ನ ದಳಪತಿಗಳ ನಡುವಿನ ಮನಸ್ತಾಪ ಹಾಗೂ ಬಿಜೆಪಿಯ ಆಪರೇಷನ್‌ಗೆ ಒಳಗಾಗಿ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
17 ಶಾಸಕರಲ್ಲಿ ಗುರುತಿಸಿಕೊಂಡಿದ್ದ ಕೆಸಿಎನ್: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು 17 ಶಾಸಕರ ಪೈಕಿ ನಾರಾಯಣಗೌಡ ಕೂಡ ಒಬ್ಬರಾಗಿದ್ದರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಸರ್ಕಾರ ರಚನೆಗೆ ಬೆಂಬಲ ನೀಡಿದ್ದರು.
ಕಮಲ ಅರಳಿಸಿದ ಕೀರ್ತಿ: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಕೆ.ಸಿ.ನಾರಾಯಣಗೌಡಗೆ ಸಲ್ಲುತ್ತದೆ. ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಮೊದಲು ರೇಷ್ಮೆ, ತೋಟಗಾರಿಕೆ ಖಾತೆ ನೀಡಲಾಗಿತ್ತು. ಆದರೆ, ಒಂದು ವರ್ಷದ ನಂತರ ಯುವ ಸಬಲೀಕರಣ ಹಾಗೂ ಕ್ರೀಡೆ ಮತ್ತು ಸಾಂಖಿಕ ಖಾತೆ ನೀಡುವ ಮೂಲಕ ಬದಲಾವಣೆ ಮಾಡಲಾಯಿತು.
ತವರು ಜಿಲ್ಲೆಗೆ ನಾಲ್ಕನೇ ಉಸ್ತುವಾರಿ ಮಂತ್ರಿ: ಮಂಡ್ಯ ರಾಜಕೀಯ ಇತಿಹಾಸದಲ್ಲಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರಿಗೆ ಹೆಚ್ಚು ನೀಡಲಾಗುತ್ತಿತ್ತು. ಈ ನಡುವೆ ಮಾಜಿ ಸಚಿವರಾದ ಎನ್. ಚೆಲುವರಾಯಸ್ವಾಮಿ, ಅಂಬರೀಷ್ ಹಾಗೂ ಸಿ.ಎಸ್.ಪುಟ್ಟರಾಜು ಅವರು ಅಲ್ಪಾವಧಿ ಕಾಲ ಉಸ್ತುವಾರಿ ಸಚಿವರಾಗಿದ್ದರು. ಪ್ರಸ್ತುತ ತವರು ಜಿಲ್ಲೆಗೆ ನಾಲ್ಕನೇ ಉಸ್ತುವಾರಿ ಮಂತ್ರಿಯಾಗಿ ಕೆ.ಸಿ.ನಾರಾಯಣಗೌಡ ಕಾರ್ಯನಿರ್ವಹಿಸಿದ್ದರು.
ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ?: ಸಮ್ಮಿಶ್ರ ಸರ್ಕಾರದ ವಿರುದ್ಧ ರಾಜೀನಾಮೆ ನೀಡಿದ್ದ 17 ಶಾಸಕರ ಪೈಕಿ ನಾರಾಯಣಗೌಡರೂ ಒಬ್ಬರು. ಬಿ.ಎಸ್.ಯಡಿಯೂರಪ್ಪ ಅವರ ಭರವಸೆಯಂತೆ ಉಪಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನ ಪಡೆದಿದ್ದರು. ಪ್ರಸ್ತುತ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಬಾಂಬೆ ಟೀಂನಲ್ಲಿ ಗುರುತಿಸಿಕೊಂಡಿದ್ದ ಕೆಲವು ಸಚಿವರ ಪೈಕಿ ಕೆ.ಸಿ.ನಾರಾಯಣಗೌಡರಿಗೂ ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.
ಜಿಲ್ಲಾ ಉಸ್ತುವಾರಿಯೂ ಬದಲಾವಣೆ?: ಒಂದು ವೇಳೆ ಮುಂದಿನ ಸಚಿವ ಸಂಪುಟದಲ್ಲಿ ಮಂತ್ರಿ ಪಟ್ಟ ಸಿಕ್ಕರೂ, ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾವಣೆಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಹೈಕಮಾಂಡ್ ಸೂಚನೆಯಂತೆ ಪಕ್ಷ ಸಂಘಟನೆಗಾಗಿ ಸ್ವಕ್ಷೇತ್ರಗಳ ಉಸ್ತುವಾರಿ ಬದಲಾಯಿಸಿ ಬೇರೆ ಜಿಲ್ಲೆಗಳಿಗೆ ನೀಡುವಂತೆ ಸೂಚಿಸಲಾಗಿತ್ತು. ಆಗ ಕೆಲವು ಉಸ್ತುವಾರಿ ಮಂತ್ರಿಗಳ ಬದಲಾವಣೆಯೂ ನಡೆಯಿತು. ಆದರೆ, ಯಡಿಯೂರಪ್ಪ ಅವರು ನಾರಾಯಣಗೌಡರನ್ನು ಬದಲಾಯಿಸಿರಲಿಲ್ಲ. ಈಗ ಮತ್ತೆ ಅದೇ ನಿಯಮ ಪಾಲಿಸಿದರೆ ಸಚಿವ ಸ್ಥಾನ ಸಿಕ್ಕರೂ ಉಸ್ತುವಾರಿ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಓದಿ: ರಾಮನಗರದಲ್ಲಿ 18 ಭುಜಗಳ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹ ಲೋಕಾರ್ಪಣೆಗೆ ಸಿದ್ಧತೆ