ಮಂಡ್ಯ: ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪ್ರಾರಂಭಿಸಲು ರಾಜ್ಯ ಸರ್ಕಾರದೊಂದಿಗೆ ಮಾತನಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭರವಸೆ ನೀಡಿದ್ದಾರೆ ಎಂದು ರೈತ ನಾಯಕಿ ಸುನಂದಾ ಜಯರಾಂ ತಿಳಿಸಿದರು.
ಬೆಂಗಳೂರಿನ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರ ನಿಯೋಗ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ತಾವು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಕೃಷ್ಣ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದರು.
2019ರ ಬಳಿಕ ಕಾರ್ಖಾನೆ ಕಬ್ಬು ಅರೆಸುವುದನ್ನು ನಿಲ್ಲಿಸಿದೆ. ನಂತರ ಬಂದ ಮೈತ್ರಿ ಸರ್ಕಾರ 100 ಕೋಟಿ ರೂ.ಅನುದಾನ ಹಾಗೂ ಹೊಸ ಕಾರ್ಖಾನೆ ಪ್ರಾರಂಭಿಸಲು 400 ಕೊಟಿ ರೂ.ಗಳನ್ನು ಬಜೆಟ್‌ನಲ್ಲಿ ಸೇರಿಸಿದೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಅನುದಾನವನ್ನು ಬಳಸದೆ ನಷ್ಟದ ಸುಳ್ಳು ನೆಪ ಹೇಳಿ ಕಾರ್ಖಾನೆಯನ್ನು 40 ವರ್ಷಗಳ ಗುತ್ತಿಗೆ ನೀಡಲು ಹಠಕ್ಕೆ ಬಿದ್ದಿದೆ. ಇದಕ್ಕೆ ಸಂಸದೆ ಸುಮಲತಾ ಬೆಂಬಲ ನೀಡಿ ರೈತರನ್ನು ದಿಕ್ಕು ತಪ್ಪಿಸಿ ಕಾರ್ಖಾನೆಯನ್ನು ಗುತ್ತಿಗೆ ಕೊಡಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸಮಿತಿ ಮುಖಂಡರು ಕೃಷ್ಣ ಎಸ್.ಎಂ.ಕೃಷ್ಣರ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮರಿತಿಬ್ಬೇಗೌಡ, ಕಾಂಗ್ರೆಸ್‌ನ ಎಸ್.ಆರ್.ಪಾಟೀಲ್ ಮತ್ತಿತರರು ಸಿಎಂಗೆ ಮೈಶುಗರ್ ಕಾರ್ಖಾನೆ ಕುರಿತು ಮನವರಿಕೆ ಮಾಡಿಕೊಟ್ಟಾಗ ಸಿಎಂ ಕೂಡ ಗುತ್ತಿಗೆ ನಿರ್ಧಾರವನ್ನು ಪರಿಶೀಲಿಸುವುದಾಗಿ ಹೇಳಿದ್ದರು.
ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಜಿಲ್ಲೆಯ ಶಾಸಕರೊಂದಿಗೆ ಸಿಎಂ ಭೇಟಿ ಮಾಡಿದ್ದಾಗ ಮುಖ್ಯ ಮಂತ್ರಿಗಳು ಖಾಸಗಿಗೆ ಕೊಡುವುದಿಲ್ಲ ಎಂದಿದ್ದರು. ಅದರಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಒತ್ತಾಯಿಸಿದ್ದಾರೆ ಎಂದರು.
ಈ ನಡುವೆ ಸಂಸದೆ ಸುಮಲತಾ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸರ್ಕಾರಿ ಸ್ವಾಮ್ಯದಲ್ಲಿ ನಡೆಸಬಾರದು. ಗುತ್ತಿಗೆಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದ್ದರಿಂದ 235 ಎಕರೆ ಆಸ್ತಿ ಹೊಂದಿರುವ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ರಾಜ್ಯ ಸರ್ಕಾರಕ್ಕೆ ತಾವು ನಿರ್ದೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಕಾರ್ಖಾನೆಗೆ ಹೆಚ್ಚಿನ ಅನುದಾನ ದೊರಕಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಮೈಶುಗರ್ ಕಾರ್ಖಾನೆ ವಿಚಾರವನ್ನು ಸೆನ್ಸೆಷನಲ್ ಮಾಡಲು ಹೊರಟಿದ್ದೇವೆ ಎಂದೆನಿಸುತ್ತಿದೆ; ಸುಮಲತಾ...!