ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ವಷ್ಟ ಭರವಸೆ ನೀಡದಿರುವ ಹಿನ್ನೆಲೆ ಹೋರಾಟ ಮುಂದುವರಿಕೆ ಬಗ್ಗೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಭೆ ನಡೆಯಿತು. ಈ ವೇಳೆ, ಸಭೆಯಲ್ಲಿ ಚರ್ಚೆ ವೇಳೆ ಮಾಜಿ ಸಚಿವ ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ನಗರದ ಸರ್ ಎಂ ವಿ ಪ್ರತಿಮೆ ಎದುರಿನ ಧರಣಿ ಸ್ಥಳದಲ್ಲಿ ಮಾಜಿ ಸಚಿವ ಎಂ.ಎಸ್ ಆತ್ಮಾನಂದ ಹಾಗೂ ರೈತ ಸಂಘದ ಇಂಡುವಾಳು ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು. ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸ್ಪಷ್ಟ ನಿಲುವು ಕೈಗೊಳ್ಳದ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮೈಶುಗರ್ ಕಾರ್ಖಾನೆ ವಿಷಯ ಪ್ರಸ್ತಾಪಗೊಂಡಾಗ ಪರಸ್ಪರ ಕೈ ತೋರಿಸುತ್ತ ಇಬ್ಬರು ಕುರ್ಚಿಯ ಮೇಲೆದ್ದು ಏರು ದನಿಯಲ್ಲಿ ವಾಗ್ವಾದಕ್ಕೆ ಇಳಿದ ಹಿನ್ನೆಲೆಯಲ್ಲಿ ಗದ್ದಲದ ಪರಿಸ್ಥಿತಿ ಏರ್ಪಟ್ಟು ಗೊಂದಲ ಉಂಟಾಯಿತು, ಸಭೆಯಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಲು ಮುಂದಾದರೂ ಸಹ ಮಾತಿನ ಚಕಮಕಿ ಕೆಲಕಾಲ ಮುಂದುವರೆಯಿತು. ಅನಂತರ ಇಬ್ಬರನ್ನು ರೈತ ಮುಖಂಡರು ಸಮಾಧಾನಪಡಿಸಿದರು.
ಕಾವೇರಿ ಹೋರಾಟ ಮುಂದುವರಿಸಲು ತೀರ್ಮಾನ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ನಿರಂತರ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕಾವೇರಿ ಹೋರಾಟ ಮುಂದುವರಿಸಲು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ತೀರ್ಮಾನಿಸಿದೆ.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಹಮ್ಮಿಕೊಂಡಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸುನಂದ ಜಯರಾಂ ಮಾತನಾಡಿ,ತಮಿಳುನಾಡಿಗೆ ಪ್ರತಿನಿತ್ಯ 2600 ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಬಿಡುವಂತೆ ಸಮಿತಿ ಶಿಫಾರಸು ಮಾಡಿರುವುದು ಮತ್ತು ಮುಖ್ಯಮಂತ್ರಿ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ನಿಲ್ಲಿಸುವ ಬಗ್ಗೆ ದಿಟ್ಟ ನಿಲುವು ತಾಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದರು.
ಹೋರಾಟ ಮುಂದುವರಿಸುವ ಬಗ್ಗೆ ಯಾವುದೇ ಗೊಂದಲ ಇಲ್ಲ, ವ್ಯತ್ಯಾಸವು ಇಲ್ಲ, ನಿರಂತರ ಧರಣಿ ಮುಂದುವರೆಯಲಿದೆ, ಸರ್ಕಾರ ಯಾವ ರೀತಿ ಮುಂದುವರೆಯಲಿದೆ ಎಂಬುದು ಅವರಿಗೆ ಬಿಟ್ಟ ವಿಚಾರ ಕಾನೂನಾತ್ಮಕ ಹೋರಾಟವನ್ನು ಮಾಡಲಿ, ವಿಶೇಷ ಜಂಟಿ ಅಧಿವೇಶನ ಕರೆದು ಚರ್ಚೆ ಮಾಡಲಿ, ಸಂಸದರನ್ನು ಒಳಗೊಂಡಂತೆ ಮಮತದ ತೀರ್ಮಾನ ಕೈಗೊಳ್ಳಲಿ, ಒಳ್ಳೆಯದನ್ನು ನಿರೀಕ್ಷೆ ಮಾಡುತ್ತೇವೆ. ಆದರೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಮುಖ್ಯಮಂತ್ರಿ ಧರಣಿ ಕೈಬಿಡಿ ಎಂದು ಹೇಳಿಲ್ಲ, ಅವರಿಗೆ ಹೋರಾಟದ ಉದ್ದೇಶವು ಅರ್ಥವಾಗಿದೆ, ಶಾಸಕರು ಹೋರಾಟ ಕೈಬಿಡಿ ಎಂದಿದ್ದಾರೆ, ನಿರಂತರ ನೀರು ಹರಿಸುತ್ತಿರುವ ಸರ್ಕಾರದ ಭಾಗವಾಗಿರುವ ಅವರು ರೈತರ ಹಿತ ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಕಾವೇರಿ ಹೋರಾಟಕ್ಕೆ ಎಂದಿನಂತೆ ಜನಸಮೂಹ ಸಹಕಾರ ನೀಡಬೇಕು ಎಂದು ಹೇಳಿದರು.
ರೈತರ ಹಿತಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ: ಇನ್ನು ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ಕಾವೇರಿ ಚಳವಳಿಗೆ ಇತಿಹಾಸ ಇದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಏಕೈಕ ಮುಖ್ಯಮಂತ್ರಿ, ಇದೊಂದು ಇತಿಹಾಸ ಎಂದು ಹೇಳಿದರು.
ಮುಖ್ಯಮಂತ್ರಿ ನಿಂತ ಜಾಗದಲ್ಲಿ ನಿಲುವು ಪ್ರಕಟಿಸಲು ಕಷ್ಟ ಆದರೂ ಸಹ ಸಿದ್ದರಾಮಯ್ಯ ಅವರು ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಲ್ಲದೆ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವುದಾಗಿ ತಿಳಿಸಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾವೇರಿ ಹೋರಾಟಗಾರರು ಧರಣಿ ಕೈ ಬಿಡುವಂತೆ ಸಿಎಂ ಮನವಿ ಮಾಡಿದ್ದಾರೆ, ನಾನು ಕೂಡ ಸರ್ಕಾರದ ಪ್ರತಿನಿಧಿಯಾಗಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದೇನೆ. ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂಬುದನ್ನ ತಿಳಿಸಿದ್ದೇನೆ, ಹೋರಾಟ ಕೈ ಬಿಡುವುದು ಚಳವಳಿಗಾರರಿಗೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಒಬ್ಬ ಹುಚ್ಚ ಎಂದ ಶಾಸಕ ಗಣಿಗ ರವಿಕುಮಾರ್: ರಮೇಶ್ ಜಾರಕಿಹೊಳಿ ಒಬ್ಬ ಹುಚ್ಚ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರು ರಮೇಶ್ ಜಾರಕಿಹೊಳಿ ವಿರುದ್ದ ಕಿಡಿಕಾರಿದರು. ಮಂಡ್ಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಸಕ ಗಣಿಗ ರವಿಕುಮಾರ್ ಇವತ್ತು ನಾಡ ಹಬ್ಬ ಕನ್ನಡ ರಾಜ್ಯೋತ್ಸವ. ಪವಿತ್ರ ದಿನದಂದು ಅರೆಹುಚ್ಚ ಅದರಲ್ಲೂ ಹುಚ್ಚನ ಬಗ್ಗೆ ಮಾತನಾಡಲ್ಲ. ಹುಚ್ಚನ ಬಗ್ಗೆ ಮಾತನಾಡಿದ್ರೆ ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದಂತೆ, ಎಲ್ಲವನ್ನೂ ನಾಳೆ ಮಾತನಾಡ್ತಿನಿ. ರಮೇಶ್ ಜಾರಕಿಹೊಳಿ ಒಬ್ಬ ಹುಚ್ಚ ಎಂದು ಟೀಕಿಸಿದರು.
ಇದನ್ನೂಓದಿ:ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರೆ ಬಹಿರಂಗಪಡಿಸಲಿ: ಯತ್ನಾಳ್ ಸವಾಲು