ಮಂಡ್ಯ: ಜಿಲ್ಲೆಯಲ್ಲಿ ಒಂದೇ ದಿನ 8 ಪ್ರಕರಣ ದಾಖಲಾದ ಹಿನ್ನೆಲೆ ಜಿಲ್ಲಾಡಳಿತ ಮುಂಬೈನಿಂದ ತಂದ ಶವದ ಹಿಂದೆ ಬಿದ್ದಿದೆ. ಮುಂಬೈನಿಂದ ತರಲಾದ ಮೃತ ವ್ಯಕ್ತಿಯ ಕೋವಿಡ್-19 ಪರೀಕ್ಷಾ ವರದಿಯನ್ನು ಮುಂಬೈನ ಸ್ಥಳೀಯ ಆಡಳಿತಕ್ಕೆ ಕೇಳಲಾಗಿದೆ. ವರದಿ ನಂತರ ಮೃತನ ಮಗ, ಇಬ್ಬರು ಹೆಣ‍್ಣು ಮಕ್ಕಳು ಹಾಗೂ ಮೊಮ್ಮಗನಿಗೆ ಹೇಗೆ ಕೊರೊನಾ ಬಂತು ಎಂಬುದರ ಬಗ್ಗೆ ತಿಳಿಯಲಿದೆ.
ಸರ್ಕಾರಿ ಆ್ಯಂಬುಲೆನ್ಸ್ನಲ್ಲಿ ಕೆಆರ್‌ಪೇಟೆ ಮಾರ್ಗದ ಮೂಲಕ ಪಾಂಡವಪುರ ತಾಲೂಕಿನ ಕೊಡಗಹಳ‍್ಳಿಗೆ ಶವ ತರಲಾಗಿತ್ತು. ನಿಯಮಾವಳಿ ಮೂಲಕವೇ ಶವ ತರಲಾಗಿದೆ. 20 ಚೆಕ್ ಪೋಸ್ಟ್ ದಾಟಿ ಆ್ಯಂಬುಲೆನ್ಸ್ ಜಿಲ್ಲೆಗೆ ಆಗಮಿಸಿದೆ. ಅದೇ ರೀತಿ ನಿಯಮಾವಳಿ ಮೂಲಕವೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕುಟುಂಬ ಸದಸ್ಯರನ್ನೂ ತಕ್ಷಣದಲ್ಲೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು ಎಂದು ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ತಿಳಿಸಿದರು.
ಮುಂಬೈನಲ್ಲಿ ಮೃತ ವ್ಯಕ್ತಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೃದಯಾಘಾತದಿಂದ ಮರಣ ಹೊಂದಿದ್ದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ನಿಯಮಾವಳಿಯಂತೆ ಶವ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಶವ ಬರುತ್ತಿದ್ದಂತೆ ಪಾಂಡವಪುರ ತಾಲೂಕು ಆಡಳಿತ ಕ್ರಮಕೈಗೊಂಡಿದೆ ಎಂದರು. ಮೃತ ವ್ಯಕ್ತಿಯ ಕೋವಿಡ್-19 ಪರೀಕ್ಷಾ ವರದಿಯನ್ನು ಅಲ್ಲಿನ ಸರ್ಕಾರಕ್ಕೆ ಕೇಳಲಾಗಿದೆ. ಇನ್ನೂ ನಾಲ್ವರಿಗೆ ಹೇಗೆ ಕೊರೊನಾ ಬಂದಿದೆ ಎಂಬುದರ ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ ಸರ್ಕಾರದ ವರದಿ ಬಂದ ನಂತರ ಕೊರೊನಾ ಹೇಗೆ ಬಂದಿತು ಎಂದು ತಿಳಿಯಲಿದೆ ಎಂದರು.
ಶವ ಸಾಗಿಸಲು ಅನುಮತಿ ಇದೆಯಾ? ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನಿಯಮಾವಳಿಯಲ್ಲಿ ಆ್ಯಂಬುಲೆನ್ಸ್ಗೆ ಅನುಮತಿ ನೀಡಲಾಗಿದೆ. ಆದರೆ, ಸರ್ಕಾರಿ ಆ್ಯಂಬುಲೆನ್ಸ್ನಲ್ಲಿ ಶವ ಸಾಗಿಸಲು ಅನುಮತಿ ನೀಡಲಾಗಿದೆಯಾ ಎಂಬ ಪ್ರಶ‍್ನೆ ಜಿಲ್ಲೆಯಲ್ಲಿ ಉದ್ಭವಿಸಿದೆ. ಇದಕ್ಕೆ ಈಗ ಜಿಲ್ಲಾಡಳಿತವೇ ಉತ್ತರಿಸಬೇಕಾಗಿದೆ. ಕೊರೊನಾ ಹೇಗೆ ಬಂದಿದೆ ಎಂಬ ಪ್ರಶ‍್ನೆಯೂ ಇದ್ದು, ಇದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಸಾವಿಗೀಡಾದ ವ್ಯಕ್ತಿಗೆ ಕೊರೊನಾ ಇತ್ತಾ ಅಥವಾ ಆ್ಯಂಬುಲೆನ್ಸ್ನಲ್ಲಿಯೇ ಕೊರೊನಾ ವೈರಸ್ ಇತ್ತಾ ಎಂಬ ಪ್ರಶ್ನೆ ಎದ್ದಿದೆ. ಮೃತ ವ್ಯಕ್ತಿಯ ಕೊರೊನಾ ಪರೀಕ್ಷಾ ವರದಿ ಇದಕ್ಕೆ ಉತ್ತರ ನೀಡಲಿದೆ.