ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿನ ಜನರಲ್ ಆಸ್ಪತ್ರೆಯ ಒಳರೋಗಿಗಳಿಗೆ ಕೊಡುವ ಒಂದು ಮುದ್ದೆ ಸಾಂಬಾರ್ ಊಟಕ್ಕೆ 92 ರೂಪಾಯಿ ದುಬಾರಿ ವೆಚ್ಚ ತಿಳಿದು ಜಿಲ್ಲಾಧಿಕಾರಿ ಡಾ ಕುಮಾರ್ ಅವರು ಶಾಕ್ ಆಗಿದ್ದಾರೆ. ಅಲ್ಲದೇ ದುಬಾರಿ ಬೆಲೆಯ ಬಿಲ್ ಕಂಡು ಅಚ್ಚರಿಯಾದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ, ನಾಗಮಂಗಲ ಪಟ್ಟಣದ ಜನರಲ್ ಆಸ್ಪತ್ರೆಗೆ ದಿಢೀರ್ ಜಿಲ್ಲಾಧಿಕಾರಿ ಡಾ ಕುಮಾರ್ ನೀಡಿದ್ದರು. ಆಸ್ಪತ್ರೆಯನ್ನು ಪರಿಶೀಲಿಸಿದ ಅವರು, ಆಸ್ಪತ್ರೆಯ ಆಡಳಿತ ಮಂಡಳಿಯ ಖರ್ಚು ವೆಚ್ಚದ ಕಡತಗಳಮೇಲೆ ಕಣ್ಣಾಯಿಸಿದರು. ಈ ವೇಳೆ ಆಸ್ಪತ್ರೆ ಒಳ ರೋಗಿಗಳ ಊಟಕ್ಕೆ ದುಬಾರಿ ವೆಚ್ಚದ ಬಿಲ್ ಕಂಡು ಶಾಕ್ ಆಗಿದ್ದಾರೆ.
ಮುದ್ದೆ-ಸಾಂಬಾರ್ ಗೆ ರೂ.92: ಇಂದಿರಾ ಕ್ಯಾಂಟೀನ್ನಲ್ಲಿ 10 ರೂ.ಗೆ ಅನ್ನ ಸಾಂಬಾರ್ ಇದೆ. ನೀವ್ಯಾಕೆ 92 ರೂ. ಕೊಡುತ್ತಿದ್ದೀರಿ. ನಾನು ಕೂಡ ಮುದ್ದೆ ತಿನ್ನುತ್ತೇನೆ. ಒಂದು ಮುದ್ದೆಗೆ ರಾಗಿ ಮಿಲ್ ಮಾಡಿಸಿ ಹಿಟ್ಟು ತಂದು ಮುದ್ದೆ ಮಾಡಿದರೆ 15 ರೂ. ಖರ್ಚಾಗುತ್ತದೆ. ಆದರೆ ಇಲ್ಲಿ 92 ರೂ. ಯಾಕೆ ನಿಗದಿ, ಯಾರು ಈ ಟೆಂಡರ್ ಅನುಮೋದಿಸಿದ್ದು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಒಂದು ಬಾಳೆ ಹಣ್ಣು 8 ರೂ.: ನಾವು ಅಂಗನವಾಡಿಗೆ 6 ರೂಪಾಯಿ ಮೌಲ್ಯದಲ್ಲಿ ಮೊಟ್ಟೆ ಕೊಡುತ್ತಿದ್ದೇವೆ. ಇಲ್ಲಿ ಯಾಕೆ ಒಂದು ಮೊಟ್ಟೆಗೆ 10 ರೂ, ಒಂದು ಬಾಳೆ ಹಣ್ಣಿಗೆ 8 ರೂಪಾಯಿನಾ ಇದೇನು ಇಷ್ಟೊಂದು ವೆಚ್ಚ. ಈ ಬಗ್ಗೆ ದರ ಪರಿಶೀಲನೆ ನಡೆಸಿ ನನಗೆ ವರದಿ ನೀಡಿ ಎಂದು ತಹಶೀಲ್ದಾರ್ ನಯಿಂ ವುನ್ನಿಸಾ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ದುಬಾರಿ ವೆಚ್ಚಕ್ಕೆ ಗರಂ ಆದ ಜಿಲ್ಲಾಧಿಕಾರಿಗಳು 100 ರೂ.ಗೆ ಅನ್ನ, ಮುದ್ದೆ, ಸಾಂಬಾರ್, ಚಪಾತಿ ಊಟ ಸಿಗಲಿದೆ. ಇಲ್ಲಿ ಯಾಕೆ ಒಂದು ಮುದ್ದೆ ಸಾಂಬಾರ್ ಊಟಕ್ಕೆ 92 ರೂ. ಬಿಲ್ ಮಾಡುತ್ತಿದ್ದೀರಿ ಎಂದು ಸಿಡಿಮಿಡಿಗೊಂಡರು. ಜೊತೆಗೆ ಏನಿದು 12 ಲಕ್ಷ ರೂ. ಕೊಟೇಷನ್? ಇ-ಟೆಂಡರ್ ಯಾಕೆ ಮಾಡಿಲ್ಲ? ಇದು ತಪ್ಪು ಲೆಕ್ಕಾಚಾರವಾಗಿದೆ. ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದ್ದಾರೆ. ಈ ವೇಳೆ ಟಿಹೆಚ್‌ಓ ಡಾ ಪ್ರಸನ್ನ, ವೈದ್ಯರಾದ ಜ್ಯೋತಿ ಲಕ್ಷ್ಮಿ, ಆಸ್ಪತ್ರೆ ಸಿಬ್ಬಂದಿಗಳಾದ ಮೋಹನ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಾಮರಾಜನಗರ ಡಿಸಿಯಾಗಿ ಶಿಲ್ಪಾ ನಾಗ್ ನೇಮಕ: ಗಡಿಜಿಲ್ಲೆಯಲ್ಲಿ ಮಹಿಳಾ 'ಶಕ್ತಿ'