ಮಂಡ್ಯ: ದಾಯಾದಿಗಳ ಜಗಳದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಡನಹಳ್ಳಿ ರಘು (29) ಸಾವಿಗೀಡಾದವರು. ಇವರಿಗೆ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಇದೇ ತಿಂಗಳು 25ರ ರಾತ್ರಿ ನಡೆದಿದ್ದ ಘಟನೆಯಿಂದ ಸುಟ್ಟಗಾಯಗಳಿಂದ ಬಳಲುತ್ತಿದ್ದರು. ಹೀಗಾಗಿ, ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ವಂತ ಕಾರು ಹೊಂದಿದ್ದ ರಘು ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಮೂಡನಹಳ್ಳಿಯಲ್ಲೇ ವಾಸವಿದ್ದರು. ಆದ್ರೆ ಸೆ.25ರ ರಾತ್ರಿ ಕಾರು ಸ್ವಚ್ಛಗೊಳಿಸಿ ಮಾರನೇ ದಿನ ಬೆಂಗಳೂರು ಹೋಗಲು ಸಿದ್ದತೆ ಆರಂಭಿಸಿದ್ದರು. ಈ ವೇಳೆ ಕಾರಿನೊಳಗೆ ಕುಳಿತು ಗ್ಲಾರ್ ಮೇಲೆತ್ತುವಾಗ ರಘುಗೆ ದಾಯಾದಿ ಶಿವು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಯ ನಂತರ ಆರೋಪಿ ಶಿವು ತಲೆ ಮರೆಸಿಕೊಂಡಿದ್ದಾನೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಭಿವೃದ್ಧಿ, ಉದ್ಯೋಗ ಸೃಷ್ಟಿಯನ್ನು ಬಿಜೆಪಿ ಕಡೆಗಣಿಸಿದೆ: ಹೆಚ್ಡಿಕೆ