ಮಂಡ್ಯ: ಮಳೆಗಾಲ ಆರಂಭವಾದರೂ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ಗೆ ಇನ್ನೂ ಜೀವಕಳೆ ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ಮಳೆ ಅಭಾವ ಈ ವ್ಯಾಪ್ತಿಯ ರೈತರ ಆತಂಕಕ್ಕೆ ಕಾರಣವಾಗಿದೆ.
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದೆ. ಮಳೆಯ ಕೊರತೆ ಎದುರಾದರೆ ರೈತರ ಆತಂಕ ಮತ್ತಷ್ಟು ಎದುರಾಗಲಿದೆ. ಸದ್ಯಕ್ಕೆ ಇರುವ ನೀರು ಕೆಲವೇ ತಿಂಗಳು ಕುಡಿಯುವುದಕ್ಕೆ ಸಾಕಾಗಲಿದೆ. ಮುಂದಿನ ದಿನಗಳಲ್ಲಿ ಕಾವೇರಿಕೊಳ್ಳದಲ್ಲಿ ಕುಡಿವ ನೀರಿಗೆ ಬರ ಎದುರಾಗಲಿದೆ.
ಮಳೆ ಬರದಿದ್ರೆ ಮಹಾನಗರ ಬೆಂಗಳೂರು ಸೇರಿ ಮೈಸೂರು , ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ ನೋಡುವುದಾದರೆ ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ-79.79 ಅಡಿಯಷ್ಟು ನೀರಿದೆ. ಇನ್ನು ಒಳಹರಿವು - 253 ಕ್ಯೂಸೆಕ್ ಇದ್ದರೆ, ಹೊರಹರಿವು-324 ಕ್ಯೂಸೆಕ್ ಇದೆ. ಇದರಲ್ಲಿ ನದಿಗೆ 274 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಪ್ರಸ್ತುತ 10.693 ಟಿಎಂಸಿ ನೀರಿನ ಸಂಗ್ರಹವಿದೆ.