ಮಂಡ್ಯ : ಜಿಲ್ಲೆಯಲ್ಲಿ ಕಾವೇರಿ ಕಿಚ್ಚು ಆರುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಕೆಲವು ದಿನಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಹಲವು ರೈತ ಮತ್ತು ಕನ್ನಡಪರ ಸಂಘಟನೆಗಳು ಸಾಲುಸಾಲು ಪ್ರತಿಭಟನೆಗಳನ್ನು ನಡೆಸುತ್ತಿವೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಪ್ರತಿನಿತ್ಯ ನೀರು ಹರಿಸುತ್ತಿದೆ. ಇದನ್ನು ವಿರೋಧಿಸಿ ಇಂದು ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ಮಾಡಿದರು.
ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಕಾವೇರಿ ನದಿಗಿಳಿದು ನೀರು ಮುಟ್ಟಿ ಪ್ರಮಾಣ ಮಾಡಿದ ಹೋರಾಟಗಾರರು, ರಕ್ತ ಕೊಟ್ಟೇವು ನೀರು ಕೊಡೆವು. ನೀರು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ನಾನಘಟ್ಟದಿಂದ ತಹಶೀಲ್ದಾರ್ ಕಚೇರಿವರೆಗೂ ತಮಟೆ ಬಾರಿಸಿಕೊಂಡು ಮೆರವಣಿಗೆ ನಡೆಸಿ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ನಂಜುಂಡೇಗೌಡ, "ಕಾವೇರಿ ನ್ಯಾಯಾಧೀಕರಣವಾದ 1989ರಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ರೈತರು ಕಾವೇರಿಗಾಗಿ ಹೋರಾಟ ಮಾಡುತ್ತಿದ್ದಾರೆ. ನೀರಾವರಿ ಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಕೆಲವು ದಿನಗಳ ಹಿಂದೆ ರೈತರು ನ್ಯಾಯಾಲಯಕ್ಕೆ ಹೋಗಲಿ ಎಂದಿದ್ದರು. ಇದೀಗ ನೀರು ಬಿಡಲು ನಾನು ಹೇಳಿಲ್ಲ ಎನ್ನುತ್ತಿದ್ದಾರೆ. ಇದು ಅಪ್ರಯೋಜನ ನೀರಾವರಿ ಮಂತ್ರಿ ಎಂಬುದನ್ನು ತೋರಿಸುತ್ತದೆ. ಹೀಗಾಗಿ ಮೊದಲು ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು. ರೈತರು ಕೋರ್ಟ್ಗೆ ಹೋಗಲಿ ಎನ್ನುವುದು ದುರಹಂಕಾರದ ಮಾತು. ಮಂಡ್ಯ ಜಿಲ್ಲೆಯ ರೈತರಿಗೆ ಹಾಕಿರುವ ಸವಾಲು. ಈ ರೀತಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರೌಡಿ ತರಹದ ಭಾಷೆ ಬಳಸುವ ಬದಲು ಗೌರವಯುತವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದೆ ರಾಜೀನಾಮೆ ನೀಡವಂತೆ ರೈತರು ಒತ್ತಾಯ ಮಾಡಿ ಹೋರಾಟ ಮಾಡುವ ದಿನಗಳು ದೂರವಿಲ್ಲ. ತಮಿಳುನಾಡಿಗೆ ನೀರನ್ನು ನಿಲ್ಲಿಸುವವರೆಗೂ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಅಲ್ಲದೆ ಈಗಾಗಲೇ ಬೆಳೆಗೆ ನೀರನ್ನು ಬಿಡದೆ ಒಣಗುವ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಬೆಳೆ ಸಂಪೂರ್ಣ ಒಣಗಿದರೆ, ಅದಕ್ಕೆ ಪರಿಹಾರ ನೀಡಬೇಕು" ಎಂದು ಸರ್ಕಾರವನ್ನು ಆಗ್ರಹಿಸಿದರು.
ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, "ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಅದರಲ್ಲೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈಗಾಗಲೇ ತಮಿಳುನಾಡಿಗೆ 13 ಸಾವಿರ ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. ಮತ್ತೆ 7 ಸಾವಿರ ಟಿಎಂಸಿ ಬಿಡಲು ನಿರ್ಧಾರ ಮಾಡಿ ನೀರು ಹರಿಸುತ್ತಿರುವುದು ವಾಸ್ತವ ಚಿತ್ರಣ. ಮುಂದೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ನಮಗೆ ಮುಂಗಾರು ಮುಗಿದಿದ್ದು, ತಮಿಳುನಾಡಿಗೆ ಮಾನ್ಸೂನ್ ಶುರುವಾಗಲಿದೆ. ಅದರೂ ನೀರನ್ನು ಪಡೆದು ಸಂಕಷ್ಟದಲ್ಲಿ ಸಿಲುಕುವಂತೆ ಸರ್ಕಾರ ಮಾಡಿದೆ. ಇದರ ವಿರುದ್ದ ಪ್ರತಿಭಟನೆ ಮಾಡುವ ಅವಶ್ಯಕತೆ ಇದೆ" ಎಂದರು.
ಇದನ್ನೂ ಓದಿ : ಕಾವೇರಿ: ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ; 'ನೀರು ಬಿಡುಗಡೆ ಆದೇಶ ಕರ್ನಾಟಕಕ್ಕೆ ನೋವಿನದು'- ಡಿಕೆಶಿ