ಮಂಡ್ಯ: ಜಿಲ್ಲೆಯ ಮದ್ದೂರಿನ ಪೌರಕಾರ್ಮಿಕ ನಾರಾಯಣ್ ಆತ್ಮಹತ್ಯೆ ಹಿನ್ನೆಲೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಮೃತ ಪೌರಕಾರ್ಮಿಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದವರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೇನೆ ಎಂದರು.
ಮೃತ ಪೌರಕಾರ್ಮಿಕ ನಾರಾಯಣನನ್ನು ಮಲ ಗುಂಡಿಗೆ ಇಳಿಸಿದ ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಿ ಅಧಿಕಾರಿಗಳು ಇದರ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ. ನಾರಾಯಣನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಖರ್ಚು ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭರಿಸಲಾಗುವುದು. ಶೀಘ್ರದಲ್ಲಿ ಮೃತ ಕುಟುಂಬದವರಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಓದಿ..ಮಂಡ್ಯದಲ್ಲಿ ನೇಣು ಬಿಗಿದುಕೊಂಡು ಪೌರ ಕಾರ್ಮಿಕ ಆತ್ಮಹತ್ಯೆ
ಒಟ್ಟು 8 ಲಕ್ಷದ 20 ಸಾವಿರ ರೂ. ಪರಿಹಾರ ಹಣವನ್ನು ಮೃತನ ಕುಟುಂಬಕ್ಕೆ ನೀಡಲಾಗುವುದು. ಈಗ ಮರಣೋತ್ತರ ವರದಿ ಬಳಿಕ 4 ಲಕ್ಷದ 12 ಸಾವಿರ ರೂ. ಪರಿಹಾರ ನೀಡಿ ನಂತರ ಉಳಿದ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.