ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆರೆ ಗ್ರಾಮದಲ್ಲಿರುವ ಈ ಮನೆ ಡಾ.ವಿವೇಕ್ ಮೂರ್ತಿ ಅವರದ್ದು. ಅಮೆರಿಕದಲ್ಲಿ ನೆಲೆ ನಿಂತಿದ್ದರೂ ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ವರ್ಷಕ್ಕೊಮ್ಮೆ ತವರಿಗೆ ಬಂದು ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಾರೆ. ಮದ್ದೂರು ತಾಲೂಕಿನ ಶಾಲೆಗಳಿಗೆ 100ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಪ್ರತಿಸ್ಪರ್ಧಿ ಜೋ ಬೈಡನ್ ಅವರು ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೆ, ಅದರ ಶ್ರೇಯಸ್ಸನ್ನು ಹಂಚಿಕೊಳ್ಳುವ ತಂಡದಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಡಾ. ವಿವೇಕ್ ಎಚ್.ಮೂರ್ತಿ ಕೂಡ ಒಬ್ಬರಾಗಿರುತ್ತಾರೆ.
ವಿವೇಕ್ ಹಿಂದುಳಿದ ವರ್ಗದ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ ಆಪ್ತ ಸಹವರ್ತಿ ಎಚ್.ಟಿ. ನಾರಾಯಣ್ ಶೆಟ್ಟಿ ಅವರ ಮೊಮ್ಮಗರಾಗಿದ್ದಾರೆ. ತಮ್ಮ ಗ್ರಾಮದ ವ್ಯಕ್ತಿಯೊಬ್ಬರು ಶ್ವೇತಭವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದಕ್ಕೆ ಹಳ್ಳಿಗೆರೆ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ. ವಿವೇಕ್ ಅವರ ತಂದೆ-ತಾಯಿ ಬಾಳಿದ ಮನೆ ಈಗಲೂ ಹಳ್ಳಿಗೆರೆಯಲ್ಲಿದೆ. ಅವರ ಸಂಬಂಧಿಗಳು ಯಾವಾಗಲಾದರೂ ಒಮ್ಮೆ ಮನೆ ಬಾಗಿಲು ತೆರೆಯುತ್ತಾರೆ. ವಿವೇಕ್ ಮೂರ್ತಿ ಅವರು ಗ್ರಾಮಕ್ಕೆ ಬಂದರೆ ಹಬ್ಬದ ಸಡಗರ ಮನೆ ಮಾಡುತ್ತದೆ. ಡಾ.ವಿವೇಕ್ ಮೂರ್ತಿ ಅವರು ತಮ್ಮ ತವರೂರನ್ನು ಇಂದಿಗೂ ಮರೆತಿಲ್ಲ. ಅವರು ಪ್ರತಿವರ್ಷ ಹಳ್ಳಿಗೆರೆಗೆ ಭೇಟಿ ನೀಡುತ್ತಾರೆ.
ಓದಿ:ಜೋ ಬೈಡನ್ ಪ್ರಚಾರದ ತಂತ್ರಗಾರ ಈ ನಮ್ಮ ಹೆಮ್ಮೆಯ ಕನ್ನಡಿಗ!
ಡಾ.ಮೂರ್ತಿ ಲಂಡನ್ನಲ್ಲಿ ಜನಿಸಿದರು ಮತ್ತು ಯುಎಸ್ನಲ್ಲಿ ಬೆಳೆದರು. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದರು. ಯೆಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಮಾಡಿದರು. ಯೆಲ್ ಸ್ಕೂಲ್ ಆಫ್ ಮೆಡಿಸಿನ್‌ನಿಂದ ಎಂಡಿ ಸಹ ಮಾಡಿದ್ದಾರೆ. ಮೂರ್ತಿ ಅವರ ಗುಂಪನ್ನು ಡಾಕ್ಟರ್ಸ್ ಫಾರ್ ಅಮೆರಿಕ ಎಂದು ಕರೆಯಲಾಗುತ್ತಿತ್ತು. 2008 ಮತ್ತು 2012 ಎರಡರಲ್ಲೂ ಒಬಾಮ ಅವರ ಚುನಾವಣೆಯ ಪ್ರಚಾರಕರಾಗಿದ್ದರು.
ಜೋ ಬೈಡನ್ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಯುಎಸ್ನ ಅಧ್ಯಕ್ಷರಾದರೆ ಅದರಲ್ಲಿ ಕರ್ನಾಟಕ ಮೂಲದ ಭಾರತೀಯ ಅಮೆರಿಕನ್ ಒಬ್ಬರು ಹೊಸ ಆಡಳಿತದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುವ ನಿರೀಕ್ಷೆಯಿದೆ. ಅದು ಡಾ.ಮೂರ್ತಿ ಅವರೇ ಆಗಿದ್ದರೆ ಆಶ್ಚರ್ಯವೇನಿಲ್ಲ.