ಮಂಡ್ಯ: ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರ ಮಂಡ್ಯದಲ್ಲಿ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ರೈತರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಇವತ್ತು ರೈತರಿಗೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ನಾಯಕರು ಕಾವೇರಿ ಕಿಚ್ಚಿನಲ್ಲಿ ಪಾಲ್ಗೊಂಡಿದ್ದರು. ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದಿರೋ ರಾಜ್ಯ ಸರ್ಕಾರ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿಯ ಮೂಲಕ ಪ್ರತಿನಿತ್ಯ ನೀರನ್ನು ಹರಿಸುತ್ತಿದೆ. ಇದು ಜಿಲ್ಲೆಯ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಅನ್ನದಾತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಗೆ ದಳಪತಿಗಳು ಎಂಟ್ರಿಕೊಟ್ಟಿದ್ದಾರೆ.
ಇವತ್ತು ಮಂಡ್ಯದಲ್ಲಿ ಜೆಡಿಎಸ್ನ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು. ಮಂಡ್ಯದ ಸಿಲ್ವರ್ ಜ್ಯುಬಲಿ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರಾದ ಜಿ ಟಿ ದೇವೇಗೌಡ, ಹೆಚ್.ಟಿ ಮಂಜು, ಮಾಜಿ ಶಾಸಕರಾದ ಸಿ ಎಸ್ ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ. ಅನ್ನದಾನಿ ಪಾಲ್ಗೊಂಡಿದ್ದರು. ಇದೇ ವೇಳೆ ಮಾತನಾಡಿದ ಶಾಸಕ ಜಿ ಟಿ ದೇವೇಗೌಡ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ನವರು ರೈತರನ್ನು ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ. ಕಾವೇರಿ ನಮ್ಮೆಲ್ಲರ ತಾಯಿ. ಬದುಕಲು ಕಾವೇರಿ ನೀರು ಬೇಕು. ರಾಜ್ಯ ಸರ್ಕಾರ ತಕ್ಷಣವೇ ತಮಿಳುನಾಡಿಗೆ ನೀರು ನಿಲ್ಲಿಸಬೇಕು. ರಾಜ್ಯ ಸರ್ಕಾರ ಬರೀ ಗ್ಯಾರಂಟಿ ಗುಂಗಿನಲ್ಲಿಯೇ ಇದೆ. ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಕಾಂಗ್ರೆಸ್ ಸರ್ಕಾರ ರೈತರ ಜೀವದ ಜೊತೆ ಚೆಲ್ಲಾಟವಾಡ್ತಿದೆ. ನ್ಯಾಯ ದೇವತೆ ಒಪ್ಪುತ್ತಾಳಾ? ಕೂಡಲೇ ಪ್ರಾಧಿಕಾರದ ಮುಂದೆ ಹೋಗಿ, ಸಂಕಷ್ಟ ಸೂತ್ರ ಅನುಸರಿಸಿದ್ದೀರಾ? ಬರಗಾಲ ಘೋಷಣೆ ಮಾಡಿಲ್ಲ. ರೈತರನ್ನ ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ ಇವರು. ಗ್ಯಾರಂಟಿ ಗ್ಯಾರಂಟಿ ಯೋಚನೆಯಲ್ಲಿದ್ದಾರೆ. ನಿಮ್ಮ ಗೌರವ ಉಳಿದುಕೊಳ್ಳಬೇಕಾದ್ರೆ ನೀರು ನಿಲ್ಲಿಸಿ. ತಮಿಳುನಾಡಿನಲ್ಲಿ ಒಗ್ಗಟ್ಟು ಇದೆ. ಆದರೆ ನಮ್ಮಲ್ಲಿ ಯಾಕೆ ಒಗ್ಗಟ್ಟು ಇಲ್ಲ" ಎಂದು ಪ್ರಶ್ನಿಸಿದರು.
ಅಂದಹಾಗೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ಬೆಂಗಳೂರು, ಮೈಸೂರಿನಂತಹ ನಗರಗಳಿಗೆ ನೀರನ್ನು ಒದಗಿಸುತ್ತಿದೆ. ಈ ಬಾರಿ ಜಲಾಶಯ ಭರ್ತಿಯಾಗಿಲ್ಲ. ರೈತರ ಬೆಳೆಗಳಿಗೂ ಕೂಡ ಜಲಾಶಯದಿಂದ ನೀರನ್ನು ಕೊಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಹೀಗಾಗಿ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯ, ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಇದೀಗ 99 ಅಡಿಗೆ ಇಳಿದಿದೆ.
ಶ್ರೀರಂಗಪಟ್ಟದಲ್ಲಿ ರೈತರಿಂದ ವಿನೂತನ ಪ್ರತಿಭಟನೆ: ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಮಂಡ್ಯದಲ್ಲಿ ಮಾತ್ರವಲ್ಲದೇ, ಶ್ರೀರಂಗಪಟ್ಟಣದಲ್ಲಿ ರೈತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ತಲೆಯ ಮೇಲೆ ಚಪ್ಪಡಿ ಕಲ್ಲುಗಳನ್ನು ಇಟ್ಟುಕೊಂಡು ಶ್ರೀರಂಗಪಟ್ಟಣದ ಕುವೆಂಪು ಸರ್ಕಲ್ನಿಂದ ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಜೊತೆಗೆ ಮಂಡ್ಯದಲ್ಲೂ ಕೂಡ ಜಿಲ್ಲಾ ರೈತ ಹಿತಾರಕ್ಷಣಾ ಸಮಿತಿ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೂ ಕೂಡ ಜೆಡಿಎಸ್ ಮುಖಂಡರು ಸಾಥ್ ನೀಡಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, "ನಿಮ್ಮ ಸುಖಕ್ಕೆ ಕಾವೇರಿ ನೀರು ಬಿಡ್ತಿದ್ದೀರಾ. ಸ್ಟಾಲಿನ್ ಓಲೈಕೆಗೆ ಬಿಟ್ಟಿರುವ ನೀರನ್ನು ಕೂಡಲೇ ನಿಲ್ಲಿಸಿ. ಜಿಲ್ಲೆಯ ಶಾಸಕರು, ಸಂಸದರು ಎಲ್ಲರೂ ನಮ್ಮ ಈ ಹೋರಾಟಕ್ಕೆ ಕೈಜೋಡಿಸಿ. ಸಂಸದೆ ಸುಮಲತಾ ಕೂಡ ಹೋರಾಟದಲ್ಲಿ ಭಾಗವಹಿಸಬೇಕು" ಎಂದು ವಿನಂತಿಸಿಕೊಂಡರು.
ಬಳಿಕ ಮಾಜಿ ಶಾಸಕ ಅನ್ನದಾನಿ ಮಾತನಾಡಿ, "ಮಂಡ್ಯ ಜಿಲ್ಲೆ ಬೆಂಕಿ ಚೆಂಡು ಇದ್ದಂಗೆ. ಮಂಡ್ಯ ಬೆಂಕಿ ಚೆಂಡನ್ನು ವಿಧಾನ ಸೌಧಕ್ಕೆ ಎಸೆಯುತ್ತೇವೆ. ಚೆಂಡು ಎಸೆದ್ರೆ ಎಲ್ಲರೂ ಉರಿದು ಹೋಗ್ತಿರಿ. ಕದ್ದು ನೀರು ಬಿಟ್ರೆ ನಿಮ್ಮದು ಕಳ್ಳ ಸರ್ಕಾರ ಅನ್ನಬೇಕಾಗುತ್ತೆ. ರಾತ್ರಿ 9 ಗಂಟೆಯ ನಂತರ ಕದ್ದು ನೀರು ಬಿಡುತ್ತಿದ್ದೀರಿ. ತಾಕತ್ತು ಇದ್ರೆ ಬೆಳಗ್ಗೆ ಹೊತ್ತು ನೀರು ಬಿಡಿ ನೋಡೋಣ" ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಇದನ್ನೂ ಓದಿ: ಮಂಡ್ಯ: ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು