ಮಂಡ್ಯ: ಬಿಜೆಪಿ ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ. ಸರ್ಕಾರ ನಡೆಸುವವರಿಗೆ ಇದು ಒಳ್ಳೆಯದಲ್ಲ ಎಂದು ನಾಗಮಂಗಲದಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಘೋಷಣೆಯನ್ನ ಯಾವಾಗ ವಾಪಸ್ ಪಡೆಯುತ್ತೆ, ಯಾವಾಗ ಹಾಕುತ್ತೋ ಯಾರ ಗಮನಕ್ಕೂ ಗೊತ್ತಾಗೋದಿಲ್ಲ. ಬೆಳಗ್ಗೆ, ಮಧ್ಯಾಹ್ನ ಒಂದು ಘೋಷಣೆ ಮಾಡ್ತಾರೆ, ಒಬ್ಬರು ವಾಪಸ್ ಪಡೆಯುತ್ತಾರೆ. ಇನ್ನೊಬ್ಬರು ಬಂದು ಏನೋ ಟೈಮ್ ಹೇಳ್ತಾರೆ, ಆ ಟೈಮ್‌ನ ಒಂದು ಗಂಟೆ ಮುಂದೆ ಹಾಕ್ತಾರೆ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅಂತಾ ನಮಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಅವಶ್ಯಕತೆ ಇದ್ದರೆ ನಿರ್ಧಾರಗಳನ್ನ ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಅದನ್ನ ಬಿಟ್ಟು ಹುಚ್ಚು, ಹುಚ್ಚುತರ ಬೆಳಗ್ಗೆ, ಮಧ್ಯಾಹ್ನ ಕರ್ಪ್ಯೂ ಮಾಡ್ತೀನಿ ಅನ್ನುವುದು ಎಷ್ಟು ಸರಿ ಎಂದು ಕಿಡಿಕಾರಿದರು. ನೈಟ್ ಕರ್ಫ್ಯೂ ಏನಕ್ಕೆ ಬೇಕು.? ಕೆಎಸ್‌ಆರ್‌ಟಿಸಿ ಬಸ್ ಓಡಾಡುತ್ತೆ ಅಂತಾರೇ, ನೈಟ್ ಕರ್ಫ್ಯೂ ಅಂತಾರೆ. ಅಲ್ಲಿ ನ್ಯೂ ಇಯರ್‌ಗೆ ಪಾರ್ಟಿ ಮಾಡಲಿಕ್ಕೆ ಅವಕಾಶ ಕೊಡ್ತಾರೆ. ಇದು ಒಂಥರಾ ಎಡಬಿಡಂಗಿತರ ಏನ್ನುವಂತಾದೆ, ಇದು ನಮಗೆ ಅರ್ಥವಾಗುತ್ತಿಲ್ಲ ಎಂದರು.
ಓದಿ : ಅನುಕಂಪ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಚಲುವರಾಯಸ್ವಾಮಿ ಗಡ್ಡ ಬಿಟ್ಟಿದ್ದಾರೆ; ಸುರೇಶ್ ಗೌಡ ಅಪಹಾಸ್ಯ
ವೈರಸ್ ರೂಪಾಂತರಗೊಂಡು ಬಂದಿದೆ. ಕಂಟ್ರೋಲ್ ಮಾಡುವುದು ಸರ್ಕಾರದ ಕರ್ತವ್ಯ. ಅದಕ್ಕೆ ತಜ್ಞರ ಸಲಹೆ ಪಡೆದು ಆಮೇಲೆ ನಿರ್ಧಾರ ತೆಗೆದುಕೊಳ್ಳಬೇಕು. ಇದೆಲ್ಲಾ ಜನರನ್ನ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ, ನ್ಯೂ ಇಯರ್ ಪಾರ್ಟಿ ಅಲ್ಲಿ ಇಲ್ಲಿ ಮಾಡಬೇಡಿ ಅನ್ನುವುದು. ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ, ಸರ್ಕಾರ ನಡೆಸುವವರಿಗೆ ಇದು ಒಳ್ಳೆಯದಲ್ಲ ಎಂದರು.