ಮಂಡ್ಯ: ಜಿಲ್ಲೆಯ ಅಭಿವೃದ್ಧಿ ಕುರಿತು ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಬೇಕಾಗಿತ್ತು. ಆದರೆ, ಜೆಡಿಎಸ್ ಸದಸ್ಯರ ಗೈರು ಹಾಗೂ ಕೋರಂ ಅಭಾವದಿಂದ ಸತತ 4ನೇ ಬಾರಿ ಸಭೆಯನ್ನು ಮುಂದೂಡಲಾಯಿತು.
ಅಧ್ಯಕ್ಷರ ರಾಜೀನಾಮೆ ವಿಚಾರ ಮುಂದಿಟ್ಟು ಜೆಡಿಎಸ್ ಸದಸ್ಯರು ಸ್ವಪಕ್ಷೀಯ ಅಧ್ಯಕ್ಷರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಸಭೆ ಕರೆದಿದ್ದರು.
ಸಭೆಗೆ ಹಾಜರಾಗಲು ಬಂದ ಜೆಡಿಎಸ್ ಸದಸ್ಯರು ಸತತ ಸಭಾಂಗಣಕ್ಕೆ ಹಾಜರಾಗದೆ ಹೊರಗೆ ಉಳಿದುಕೊಂಡರು. ಉಳಿದಂತೆ ಕೆಲ ಜೆಡಿಎಸ್ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರು ಮಾತ್ರ ಸಭೆಗೆ ಬಂದಿದ್ದರೂ ಸಹ ಕೋರಂ ಅಭಾವದಿಂದ ಸಭೆ ಮುಂದೂಡಲಾಯಿತು.
ಎರಡು ಬಾರಿ ಸದಸ್ಯರ ಆಗಮನ ನಿರೀಕ್ಷೆಯಲ್ಲಿದ್ದ ಅಧ್ಯಕ್ಷರು, ಸದಸ್ಯರು ಗೈರಾದ ಕಾರಣ ಸಭೆಯನ್ನು ನಾಲ್ಕನೇ ಬಾರಿ ಮುಂದೂಡಿದರು. ಸಮಸ್ಯೆ ಕುರಿತು ಚರ್ಚೆಗೆ ಆಗಮಿಸಿದ್ದ ಕಾಂಗ್ರೆಸ್ ಸದಸ್ಯರು ನಿರಾಸೆಯಿಂದ ಹೊರ ನಡೆಯಬೇಕಾಯಿತು.
ಪಂಚಾಯತ್ ರಾಜ್ ಅಧಿನಿಯಮದನ್ವಯ ಸತತ ಮೂರು ಸಭೆಗೆ ಗೈರಾದರೆ ಸದಸ್ಯತ್ವ ರದ್ದಾಗುವ ಭಯವಿದೆ. ಹೀಗಾಗಿ ಕೋರಂ ಅಭಾವ ಸೃಷ್ಟಿ ಮಾಡುವುದರ ಜೊತೆಗೆ ಸಭೆ ನಡೆಯದಂತೆ ನೋಡಿಕೊಳ್ಳುವ ಯೋಜನೆ ರೂಪಿಸಿ ಜೆಡಿಎಸ್ ಸದಸ್ಯರು ತಂತ್ರ ರೂಪಿಸಿದ್ದರು.
ಕಳೆದ ಬಾರಿ ಸಭೆಗೆ ಬಂದ ಸದಸ್ಯರು ಇಂದು ಗೈರಾದರೆ, ಮೊದಲ ಸಭೆಗೆ ಬಂದವರು ಇಂದು ಸಹ ಸಭೆಗೆ ಆಗಮಿಸಿದ್ದರು. ಆ ಮೂಲಕ ಅಧ್ಯಕ್ಷರಿಗೆ ಕೋರಂ ಅಭಾವ ಸೃಷ್ಟಿ ಮಾಡಿ ಸಭೆಯನ್ನೇ ಮುಂದೂಡುವಂತೆ ಮಾಡಿದ್ದಾರೆ.
ಸದಸ್ಯರ ನಡುವೆ ವಾಕ್ ಸಮರ:
ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಸಭೆ ವಿಚಾರವಾಗಿ ವಾಕ್ಸಮರ ನಡೆಯಿತು. ಜೆಡಿಎಸ್ ಸದಸ್ಯ ಯೋಗೇಶ್‌ಗೆ ಕಾಂಗ್ರೆಸ್‌ನ ಮಹಿಳಾ ಸದಸ್ಯರು ತರಾಟೆಗೆ ತೆಗೆದುಕೊಂಡರು. ನಿಮ್ಮ ಸಮಸ್ಯೆಯನ್ನು ಹೊರಗೆ ಇತ್ಯರ್ಥ ಮಾಡಿಕೊಳ್ಳಿ, ಸಭೆ ನಡೆಸಿ ಎಂದು ಎಚ್ಚರಿಸಿದರು. ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರನ್ನೂ ತರಾಟೆಗೆ ತೆಗೆದುಕೊಂಡ ಸದಸ್ಯರು ಸಭೆ ನಡೆಸಿ ಇಲ್ಲವೇ ಮುಂದೂಡಿ ಎಂದು ಒತ್ತಾಯಿಸಿದರು. ಕೊನೆಗೆ ಕೋರಂ ಅಭಾವದಿಂದ ಅಧ್ಯಕ್ಷರು ಸಭೆ ಮುಂದೂಡಿದರು.
ಅಧ್ಯಕ್ಷ ಸ್ಥಾನದ ಹಿಂದೆ ರಾಜಕೀಯ:
ಅಧ್ಯಕ್ಷರಾದ ನಾಗರತ್ನ ಸ್ವಾಮಿ ಜೆಡಿಎಸ್ ಸದಸ್ಯರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಆಕಾಂಕ್ಷಿಗಳಾಗಿದ್ದರು. ಆದರೆ ಅಧ್ಯಕ್ಷರ ಪತಿ ಜೆಡಿಎಸ್ ಪ್ರಭಾವಿ ನಾಯಕರಾದ್ದು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸ್ವಾಮಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದರಿಂದ ಅಧ್ಯಕ್ಷರನ್ನು ಸ್ಥಾನದಿಂದ ಕೆಳಗಿಳಿಸಲು ಯೋಜನೆ ರೂಪಿಸಿದ್ದರು. ಆದರೆ ಅಧ್ಯಕ್ಷರು ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ.