ಮಂಡ್ಯ: ಸರ್ಕಾರಕ್ಕಿದು ಕಷ್ಟದ ಕಾಲ. ಆದರೂ ವಿಶ್ವಾಸಮತ ಗೆಲುವಿನ ನಿರೀಕ್ಷೆ ಇದೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ವಿಷದ ನೀರು ಕುಡಿದು ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಕ್ಕಿದು ಬಹಳ ಕಷ್ಟದ ಕಾಲ. ಮಾಧ್ಯಮಗಳ ಜಾಗೃತಿಯಿಂದ ಶಾಸಕರಿಗೆ ಒತ್ತಡ ಇದೆ. ಹೀಗಾಗಿ ಕ್ಷೇತ್ರದ ಸಮಸ್ಯೆ ನಿಭಾಯಿಸೋದು ಕಷ್ಟವಾಗಿದ್ದು, ಶಾಸಕರಿಗೆ ಇದು ಚಾಲೆಂಜಿಂಗ್ ಪಾರ್ಟ್ ಆಗಿದೆ ಎಂದರು.
ಸರ್ಕಾರ ಉಳಿಯುತ್ತೆ. ಏನೂ ತೊಂದರೆ ಆಗೋದಿಲ್ಲ. ಸಿಎಂ ಬದಲಾದರೆ ಬಡವರು, ರೈತರಿಗೆ ಮೋಸವಾದಂತೆ. ಖಂಡಿತವಾಗಿಯೂ ಗುರುವಾರ ನಾವು ವಿಶ್ವಾಸಮತ ಗೆಲ್ಲುತ್ತೇವೆ. ಅತೃಪ್ತ ಶಾಸಕರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಅಂತಿಮವಾಗಿ ಎಲ್ಲಾ ಸರಿ ಹೋಗುವ ವಿಶ್ವಾಸ ಇದೆ ಎಂದರು.
ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಅವರಿಗೆ ಇದು ವಿಶ್ರಾಂತಿ ಕಾಲ. ಎಲ್ಲವನ್ನೂ ಆಲಿಸಿಕೊಂಡು ಸುಮ್ಮನಿದ್ದರೆ ಉತ್ತಮ. ಸಿಎಂ ಬಗ್ಗೆ ಅಡ್ಡಾದಿಡ್ಡಿ ಮಾತಾಡೋದು ತರವಲ್ಲ. ಚಲುವರಾಯಸ್ವಾಮಿ ಜನಕ್ಕೆ ಪರಿಚಯ ಆಗಿದ್ದೇ ಕುಮಾರಸ್ವಾಮಿಯಿಂದ. ಅದರ ಅರಿವು ಇದ್ದರೆ ಉತ್ತಮ ಎಂದು ಸಲಹೆ ನೀಡಿದರು.