ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿವೆ. ಇನ್ನೊಂದು ಕಡೆ ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿವೆ.
ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಈ ದೇವಸ್ಥಾನದ ಮೇಲೆ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನದ ಹಲವು ಕುರುಹುಗಳು ಇವೆ. ಇಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿ ಇದೆ. ಈ ನಿಟ್ಟಿನಲ್ಲಿ ನಮಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ವಿಹೆಚ್‌ಪಿ ಮನವಿ ಸಲ್ಲಿಸಿತ್ತು.
ಜಿಲ್ಲಾಧಿಕಾರಿಗಳು ಈ ಮನವಿಗೆ ಪೂರಕವಾಗಿ ಸ್ಪಂದಿಸದ ಕಾರಣ ವಿಹೆಚ್‌ಪಿ ಹಾಗೂ ಬಜರಂಗ ದಳದ ಪದಾಧಿಕಾರಿಗಳು ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದಾರೆ. ಈ ಚಲೋದಲ್ಲಿ ಸಾವಿರಾರು ಮಂದಿ ಹನುಮನ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಅಂದು ಹನುಮ ಭಕ್ತರು ಮಸೀದಿಯ ಒಳಗಡೆ ಪ್ರವೇಶ ಮಾಡಿ ಆಂಜನೇಯಸ್ವಾಮಿ ಪೂಜೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೂನ್ 4 ರಂದು ಶ್ರೀರಂಗಪಟ್ಟಣ ಚಲೋ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಾಮಿಯಾ ಮಸೀದಿ ಸುತ್ತಲೂ ಪೊಲೀಸರ ಕಣ್ಗಾವಲು ಇರಿಸಲಾಗಿದ್ದು, ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, ಜೂನ್ 3 ಮತ್ತು 4 ರಂದು ಜಾಮಿಯಾ ಮಸೀದಿ ಸುತ್ತ 144 ಸೆಕ್ಷನ್ ಜಾರಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಇತ್ತೀಚೆಗೆ ಜ್ಞಾನವಾಪಿ ಮಸೀದಿಯ ಬಾವಿಯೊಳಗೆ 'ಶಿವಲಿಂಗ' ಪತ್ತೆಯಾಗಿದ್ದು, ಸದ್ಯ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ಈ ಶಿವಲಿಂಗವು ನಂದಿಯನ್ನು ಎದುರಿಸುತ್ತಿರುವ ರೂಪದಲ್ಲಿದೆ ಎಂದು ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಮತ್ತು ವಿಷ್ಣು ಜೈನ್ ಹೇಳಿದ್ದರು.
(ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದ ಹಿಂದೂ ವಕೀಲರು!)