ಮಂಡ್ಯ: ಕಲ್ಲು ಗಣಿ ಮಾಲೀಕರಿಗೆ ಐಟಿ ಶಾಕ್ ನೀಡಿದ್ದು ಸಚಿವ ಪುಟ್ಟರಾಜು ಸಹೋದರ ಸಂಬಂಧಿ ಚಿಕ್ಕ ರಾಮೇಗೌಡರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದೆ. ಸಚಿವರ ಮನೆ ಸಮೀಪವೇ ಸಹೋದರನ ಮನೆ ಇದ್ದು, 6 ಮಂದಿಯ ತಂಡ ಶೋಧನೆಯಲ್ಲಿ ತೊಡಗಿದೆ.
ರಾತ್ರಿಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಐಟಿ ದಾಳಿ ಬಗ್ಗೆ ಮಾಹಿತಿ ಬಿಚ್ಚಿಟ್ಟದ್ದರು. ಬೆಳಗ್ಗೆ ದಾಳಿ ಮಾಡಲಾಗಿದ್ದು, ಸಚಿವ ಪುಟ್ಟರಾಜು ಅವರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪುಟ್ಟರಾಜು ಸಹೋದರ ಚಿಕ್ಕ ರಾಮೇಗೌಡರ ಮಕ್ಕಳಾದ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಹಾಗೂ ಶಿವಕುಮಾರ್ ಎಂಬುವರ ಮೇಲೆ ಈ ದಾಳಿ ನಡೆದಿದೆ.
ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಹಲವು ಮಂದಿ ದೂರು ನೀಡಿದ್ದರು. ದೂರಿನ ಅನ್ವಯ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಅಶೋಕ್ ಮತ್ತು ಶಿವಕುಮಾರ್ ಎಸ್‌ಟಿಜಿ ಸ್ಟೋನ್ ಕ್ರಷರ್ ಮಾಲೀಕತ್ವ ಹೊಂದಿದ್ದು ಈ ಕ್ರಷರ್‌ನಲ್ಲಿ ಸಚಿವ ಪುಟ್ಟರಾಜು ಪತ್ನಿ ನಾಗಮ್ಮನವರ ಪಾಲುದಾರಿಕೆಯೂ ಇದೆ. ಹೀಗಾಗಿ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇನ್ನು ಮೈಸೂರಿನ ಮನೆ ಹಾಗೂ ಕ್ರಷರ್ ಮೇಲೂ ದಾಳಿ ಮಾಡಲಾಗಿದೆ. ಬೆಳಗ್ಗೆಯೇ ದಾಳಿ ಮಾಡಿರುವ ಐಟಿ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ದಾಳಿಗೆ ಸ್ಥಳೀಯ ಪೊಲೀಸರನ್ನು ನೆಚ್ಚದೆ ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಬರಲಾಗಿದೆ.