ಮಂಡ್ಯ: ಆಕೆಯನ್ನು ಆತ ಕಾಡಿ, ಬೇಡಿ ಪ್ರೀತಿಸಿ ಮದುವೆಯಾಗಿದ್ದ. ಹೆಣ್ಣು ಮಕ್ಕಳನ್ನು ಹೆತ್ತಳು ಎಂಬ ಒಂದೇ ಕಾರಣಕ್ಕೆ ಆಕೆಯನ್ನು ವಿಕೃತವಾಗಿ ಹಿಂಸಿಸಿದ್ದ. ಇದಕ್ಕೆ ಬೇಸತ್ತು ಪತ್ನಿ ವಿಚ್ಛೇದನ ಪಡೆದು ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದಳು. ಆದರೆ ಇದನ್ನು ಸಹಿಸದ ಆ ಪಾಪಿ ಗಂಡ, ಪತ್ನಿಯ ಕತ್ತುಕೊಯ್ದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ 32 ವರ್ಷದ ಶಾಲಿನಿ ಕೊಲೆಯಾದ ಮಹಿಳೆ. ಸುರೇಶ್(40) ಕೊಲೆ ಮಾಡಿದ ಪಾಪಿ ಪತಿ. ಶಾಲಿನಿ ಹಾಗೂ ಸುರೇಶ್ ಒಂದೇ ಗ್ರಾಮದವರಾಗಿದ್ದು, ಕಳೆದ 13 ವರ್ಷಗಳ ಹಿಂದೆ ಶಾಲಿನಿ ಕಾಲೇಜಿಗೆ ಹೋಗುವ ವೇಳೆ ಆಕೆಯನ್ನು ಪ್ರೀತಿಸಿ ಸುರೇಶ್ ಮದುವೆಯಾಗಿದ್ದನು. ವಿವಾಹವಾದ ಎರಡ್ಮೂರು ವರ್ಷಗಳ ಕಾಲ ಸಂಸಾರ ಚೆನ್ನಾಗಿಯೇ ಇತ್ತು.
ಹೆಣ್ಣು ಮಗು ಜನಿಸಿದ ಬಳಿಕ ಹದಗೆಟ್ಟ ಸಂಸಾರ: ಕೆಲ ವರ್ಷಗಳ ಬಳಿಕ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಇಲ್ಲಿಂದ ಸುರೇಶ್ ತನ್ನ ಕ್ರೌರ್ಯ ಬುದ್ಧಿಯನ್ನು ಪ್ರದರ್ಶನ ಮಾಡಲು ಶುರು ಮಾಡಿದ್ದಾನೆ. ಕುಡಿದು ಬಂದು ಶಾಲಿನಿಗೆ ಹೊಡೆದು-ಬಡಿದು ಗಲಾಟೆ ಮಾಡುತ್ತಿದ್ದ. ಹೀಗೆ ಒಂದಷ್ಟು ವರ್ಷಗಳು ಕಳೆದ ಬಳಿಕ ಇವರಿಗೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಎರಡನೇ ಬಾರಿಯೂ ಹೆಣ್ಣು ಮಗು ಹೆತ್ತಿದ್ದೀಯಾ ಎಂದು ಸುರೇಶ್, ಶಾಲಿನಿಗೆ ಮತ್ತಷ್ಟು ಹಿಂಸೆ ನೀಡುತ್ತಿದ್ದನು. ಅಲ್ಲದೆ ಶಾಲಿನಿಯನ್ನು ಮುಗಿಸಿಬಿಡೋ ನಿರ್ಧಾರ ಮಾಡಿ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಮೂರು ಬಾರಿ ಪ್ರಯತ್ನ ಕೂಡ ಮಾಡಿದ್ದನಂತೆ.
ಜೈಲಿಯಿಂದ ಹೊರ ಬಂದ್ರೂ ಕಡಿಮೆಯಾಗದ ಪತಿಯ ಹಿಂಸೆ: ಪತಿಯ ಹಿಂಸೆಯಿಂದ ಬೇಸತ್ತ ಶಾಲಿನಿ, ಕೊನೆಗೆ ಪೊಲೀಸ್ ಠಾಣೆಯಲ್ಲಿ ಸುರೇಶ್ ವಿರುದ್ಧ ದೂರು ದಾಖಲಿಸಿ ಜೈಲಿಗಟ್ಟಿದ್ದಳು. ಇದಾದ ಕೆಲ ದಿನಗಳ ಬಳಿಕ ಜೈಲಿನಿಂದ ಹೊರ ಬಂದ ಸುರೇಶನು ಮತ್ತೆ ಪತ್ನಿ ಶಾಲಿನಿಗೆ ಹಿಂಸೆ ಕೊಡಲು ಆರಂಭಿಸಿದ್ದ. ಇದೆಲ್ಲದಕ್ಕೂ ಕೊನೆ ಹಾಡಬೇಕೆಂದು ಶಾಲಿನಿ ಕಳೆದ ನಾಲ್ಕು ವರ್ಷದ ಹಿಂದೆ ಸುರೇಶ್ಗೆ ವಿಚ್ಛೇದನ ನೀಡಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು.
ಇದನ್ನೂ ಓದಿ: ವಿದ್ಯಾರ್ಥಿನಿಯ ಜೊತೆ ಅಸಭ್ಯ ವರ್ತನೆ.. ಮೈಸೂರಿನಲ್ಲಿ ಮುಖ್ಯ ಶಿಕ್ಷಕ ಸೇವೆಯಿಂದ ವಜಾ
ಹೀಗಿರುವಾಗ ಶುಕ್ರವಾರ ಶಾಲಿನಿ ಗಾರ್ಮೆಂಟ್ನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಆಕೆಯನ್ನು ಎಳೆದುಕೊಂಡು ಹೋಗಿ ಕತ್ತುಕೊಯ್ದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳು ಅನಾಥವಾಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ