ಮಂಡ್ಯ: ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣಾ ನಾಮಪತ್ರ ಸಲ್ಲಿಕೆ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಯುವಕರು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರುತ್ತಿದ್ದು, ಚುನಾವಣಾ ಕಣ ರಂಗೇರಿದೆ.
ಹೌದು, ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಂದ ಗ್ರಾಮದ ಬಿ.ಕೆ.ಸೌಮ್ಯ ಎಂಬಿಎ ಮತ್ತು ಎಂ.ಕಾಂ ಪದವೀಧರೆಯಾಗಿದ್ದು, ನಾಮಪತ್ರ ಸಲ್ಲಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದು, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಭಾರತ ಹಳ್ಳಿಗಳ ದೇಶ. ಆಡಳಿತ ವ್ಯವಸ್ಥೆಯು ತಳಮಟ್ಟದಿಂದಲೇ ಸುಧಾರಣೆಯಾಗಬೇಕಿದೆ. ಗ್ರಾಮ ಮಟ್ಟದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಗ್ರಾಮ, ತಾಲೂಕು ಮತ್ತು ಜಿಲ್ಲೆಗಳು ತಾವಾಗಿಯೇ ಅಭಿವೃದ್ಧಿಯಾಗುತ್ತವೆ. ಅಲ್ಲದೇ ರಾಜಕೀಯಕ್ಕೆ ಪ್ರಜ್ಞಾವಂತರು, ವಿದ್ಯಾವಂತರು ಮತ್ತು ಯುವಕರ ಅವಶ್ಯಕತೆ ಹೆಚ್ಚಾಗಿದೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಅಲ್ಲದೇ ಗ್ರಾಮದ ಜನರು, ಯುವಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅಭ್ಯರ್ಥಿ ಬಿ.ಕೆ.ಸೌಮ್ಯ ತಿಳಿಸಿದರು.
ಕಳೆದ ಹತ್ತು ವರ್ಷದ ಅವಧಿಯಲ್ಲಿ ಗೆದ್ದ ಅಭ್ಯರ್ಥಿಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಈಗ ನಮ್ಮ ಪಂಚಾಯಿತಿಯಲ್ಲಿ ಪದವೀಧರೆಯೊಬ್ಬರು ಚುನಾವಣೆಯಲ್ಲಿ ಸ್ವರ್ಧಿಸುತ್ತಿರುವುದು ಸಂತಸದ ಸಂಗತಿ. ಚುನಾವಣೆಯಲ್ಲಿ ಯುವಕರು ಆಯ್ಕೆಯಾದರೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂಬುವುದು ಗ್ರಾಮಸ್ಥರ ಮಾತಾಗಿದೆ.