ಮಂಡ್ಯ : ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿ ಸರ್ಕಲ್‌ನ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ಗಣಪತಿ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಸಿ ಎಸ್ ಪುಟ್ಟರಾಜು ಹಾಗೂ ಬೆಂಬಲಿಗರ ವಿರುದ್ಧ ಪರಿಶೀಲನೆ ನಡೆಸುವಂತೆ ಸರ್ಕಾರದ ಉಪ ಕಾರ್ಯದರ್ಶಿ ನೀಡಿದ್ದ ಆದೇಶವನ್ನು ವಾಪಸ್ ಪಡೆದಿದ್ದಾರೆ.
ಶಾಸಕ ಪುಟ್ಟರಾಜು ಮತ್ತು ಬೆಂಬಲಿಗರು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ದೇಗುಲ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ರವೀಂದ್ರ ಎಂಬುವರು ಸರ್ಕಾರದ ಅಧೀನ ಕಾರ್ಯದರ್ಶಿಗೆ ದೂರು ನೀಡಿದ್ದರು.
ದೂರನ್ನು ಪರಿಶೀಲಿಸಿದ್ದ ಸರ್ಕಾರದ ಅಧೀನ ಕಾರ್ಯದರ್ಶಿ ಶೋಭಾ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತಕ್ಕೆ ಆದೇಶಿಸಿದ್ದರು.
ಅದರಂತೆ ಸೋಮವಾರ ಮತ್ತೆ ಪೊಲೀಸ್ ಮಹಾನಿರ್ದೇಶಕರಿಗೆ ಎಂ ಆರ್ ಶೋಭಾ ಪತ್ರ ಬರೆದಿದ್ದಾರೆ. ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸೆಪ್ಟೆಂಬರ್ 20ರಂದು ಕರ್ನಾಟಕ ಧಾರ್ಮಿಕ ಕಟ್ಟಡಗಳ(ಸಂರಕ್ಷಣೆ) ವಿಧೇಯಕ 2021ನ್ನು ಜಾರಿಗೆ ತಂದಿರುವುದರಿಂದ ಉಲ್ಲೇಖಿತ ಅಕ್ಟೋಬರ್ 7ರ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದ ಹಿನ್ನೆಲೆ ಈ ಬಗ್ಗೆ ಪರಿಶೀಲನೆ ನಡೆಸಿದ್ದೆವು ಎಂದು ಪಾಂಡವಪುರ ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, 2009ರ ಸುಪ್ರೀಂಕೋರ್ಟ್ ಆದೇಶ ಹಾಗೂ ಸರ್ಕಾರದ ಸುತ್ತೋಲೆಯಂತೆ ತೆರವುಗೊಳಿಸಲು ಸಿದ್ಧಪಡಿಸಿರುವ ಪಟ್ಟಿಯನ್ನು ಪರಿಶೀಲಿಸಿದಾಗ ಈ ದೇವಸ್ಥಾನದ ಹೆಸರಿಲ್ಲ. ಅಲ್ಲದೇ, ದೇವಸ್ಥಾನದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದರು.
ಈ ಸ್ಥಳದ ದಾಖಲೆ ಪರಿಶೀಲಿಸಿದಾಗ ಹಿಂದೆ ಇದ್ದ ಮಂಡಲ ಪಂಚಾಯತ್ ಖಾತೆ ಪುಟ ಸಂಖ್ಯೆ 11ರಲ್ಲಿ ಖಾತೆ ಸಂಖ್ಯೆ 13, 14 ಇದ್ದು ಗ್ರಾಮ ಠಾಣಾ ಗಣಪತಿ ದೇವಸ್ಥಾನ ಎಂಬುದಾಗಿ ನಮೂದಾಗಿದೆ ಎಂದು ವರದಿಯಲ್ಲಿ ಹೇಳಿದ್ದರು.
ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ ಎಂಬ ಅಂಶವನ್ನು ತಹಶೀಲ್ದಾರ್ ಕಾರ್ಯಪಾಲಕ ಇಂಜಿನಿಯರ್‌ಗೆ ನೀಡುವ ಪತ್ರದಲ್ಲಿ ಉಲ್ಲೇಖಿಸಿ ವರದಿ ನೀಡಿದ್ದರು.